ಮೀನು ಕಾರ್ಖಾನೆ ವಿರೋಧಿಸಿ ಇಂದು ಪ್ರತಿಭಟನೆ
ಮಂಗಳೂರು: ಬೆಂಗರೆಯ ಸೂಪರ್ಸ್ಟಾರ್ ಸ್ಪೋರ್ಟ್ಸ್ಕ್ಲಬ್ ಆಟದ ಮೈದಾನದಲ್ಲಿ ನಿರ್ಮಾಣಗೊಳ್ಳಲಿರುವ 'ಮೀನಿನ ಎಣ್ಣೆ ಕಾರ್ಖಾನೆ' ವಿರೋಧಿಸಿ ಬೆಂಗರೆ ಅಲ್ಮದ್ರಸತುಲ್ ದೀನಿಯಾ ಸಂಘಟನೆ ಸೋಮವಾರ ಸಂಜೆ 5.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದೆ ಎಂದು ಸಂಘಟನೆ ಅಧ್ಯಕ್ಷ ಮೊಹಮ್ಮದ್ ಸಾಲಿ ಹಾಜಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಮೀನಿನ ಕಾರ್ಖಾನೆ ನಿರ್ಮಾಣಗೊಂಡಲ್ಲಿ ಅಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಅಲ್ಲದೆ ವಾತಾವರಣ ದುರ್ಗಮ ವಾಸನೆಯಿಂದ ಕೂಡಿರುತ್ತದೆ. ಪರವಾನಗಿ ರದ್ದತಿಗಾಗಿ ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದರು. ಅಪರಾಹ್ನ 2.30ಕ್ಕೆ ಬೆಂಗರೆ ನಿವಾಸಿಗಳು ಜಾತಿ ಭೇದ ಮರೆತು ಉತ್ತರ ಧಕ್ಕೆಯಿಂದ ಕಾಲ್ನಡಿಗೆ ಜಾಥಾ ಮೂಲಕ ಜಿಲ್ಲಾಧಿಕಾರಿ ಕಚೇರಿಯ ಬಳಿ ತೆರಳಿ ಸಂಜೆ 5.30ಕ್ಕೆ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಇಂದು ಅಸ್ತಮಾ, ಶ್ವಾಸಕೋಶ ಉಚಿತ ತಪಾಸಣೆ
ಮಂಗಳೂರು: ಮಂಗಳೂರು ಹಾರ್ಟ್ಸ್ಕ್ಯಾನ್ ಫೌಂಡೇಶನ್ ಆಶ್ರಯದಲ್ಲಿ ಒಮೇಗಾ ಆಸ್ಪತ್ರೆಯಲ್ಲಿ ಅಸ್ತಮಾ ಹಾಗೂ ಶ್ವಾಸಕೋಶದ ಉಚಿತ ತಪಾಸಣಾ ಶಿಬಿರ ಸೋಮವಾರ ಜರುಗಲಿದೆ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಎಸ್.ಎಲ್.ಭಾರಧ್ವಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ ಶಿಬಿರ ನಡೆಯುವುದು. ಉಚಿತವಾಗಿ ಇಸಿಜಿ, ಹೃದಯದ ಸ್ಕ್ಯಾನಿಂಗ್ಪ್ರ್ಮೇಹ ರೋಗ, ಡಯಾಬಿಟಿಕ್ ತಪಾಸಣೆ ಮಾಡಲಾಗುವುದು. ವಿವರಕ್ಕೆ: 9482661772.
ಅಂಬೇಡ್ಕರ್ ಭವನ ಆಗ್ರಹಿಸಿ ಇಂದು ಜಾಥಾ
ವಿಟ್ಲ: ಇಲ್ಲಿಯ ಕಸಬಾ ಗ್ರಾಮದ ಸರ್ವೇ ನಂ. 477/4ಬಿ 2ಎಯಲ್ಲಿ ಮತ್ತು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಸರ್ವೇ ನಂ. 66/1ಎ2ಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಿಸುವಂತೆ ಹಾಗೂ ವಿಟ್ಲದಲ್ಲಿ ಸರ್ಕಾರಿ ಪ್ರೌಢ ಶಾಲೆ, ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜ್ ಮಂಜೂರು ಆಗ್ರಹಿಸಿ ಸೋಮವಾರ ಬೆಳಗ್ಗೆ 10ಕ್ಕೆ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಜಾಥಾ ಮತ್ತು ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.
ವಿದ್ಯುತ್ ಕಡಿತ: ಇಂದು ಸುಳ್ಯದಲ್ಲಿ ಪ್ರತಿಭಟನೆ
ಸುಳ್ಯ: ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ನಡೆಯುತ್ತಿದ್ದು, ಇದರಿಂದ ಸಾರ್ವ ಜನಿಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ಸೋಮವಾರ, ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯರ ಒಕ್ಕೂಟದ ವತಿಯಿಂದ ಸುಳ್ಯ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಜಿ.ಕೆ. ಹಮೀದ್ ತಿಳಿಸಿದರು.