ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯ ಅಸ್ಥಿ ಪಂಜರ ಪತ್ತೆ
ಪಡುಬಿದ್ರಿ: ಸುಮಾರು 4 ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿ ನಾಪತ್ತೆ ಆಗಿದ್ದ ವ್ಯಕ್ತಿಯೊಬ್ಬರ ಶವ ಭಾನುವಾರ ಬೆಳಗ್ಗೆ ಸಂಶಯಾಸ್ಪದ ರೀತಿಯಲ್ಲಿ ಅವರ ಮನೆ ಪಕ್ಕದ ಗದ್ದೆಯಲ್ಲಿ ಪತ್ತೆ ಆಗಿದೆ.
ಹೆಜಮಾಡಿ ಕೋಡಿ ನಿವಾಸಿ ಮೊಹಮ್ಮದ್ ತಮ್ಮ ಸಾಕು ಮಗಳೊಂದಿಗೆ ವಾಸವಾಗಿದ್ದು, ಕಳೆದ ನ. 15ರಂದು ಎಂದಿನಂತೆ ಅಳಿವೆ ಕೋಡಿಗೆ ಮೀನುಗಾರಿಕೆಗೆ ತೆರಳಿದವರು ಹಿಂದಕ್ಕೆ ಬಾರದೇ ನಾಪತ್ತೆ ಆಗಿದ್ದರು.
ಅಂದು ದೀಪಾವಳಿ ನಿಮಿತ್ತ ಮೀನುಗಾರಿಕೆಗೆ ರಜೆ ಇದ್ದುದರಿಂದ ಮೀನುಗಾರಿಕೆಗೆ ತೆರಳಿಲ್ಲ ಎಂದು ಬೋಟಿನ ಮಾಲೀಕರು ತಿಳಿಸಿದ್ದರು. ಇದರಿಂದ ಸಂಶಯ ಮತ್ತು ಆತಂಕಗೊಂಡ ಮನೆಯವರು ಪರಿಸರದಲ್ಲೆಲ್ಲಾ ಹುಡುಕಾಟ ನಡೆಸಿದರೂ ಮೊಹಮ್ಮದ್ ಪತ್ತೆ ಆಗಿರಲಿಲ್ಲ. ಈ ಬಗ್ಗೆ ಪೋಲಿಸ್ ವರಿಷ್ಠಾಧಿಕಾರಿ ಸಹಿತ ರಾಜ್ಯಪಾಲರಿಗೂ ದೂರು ನೀಡಲಾಗಿತ್ತು.
ಗದ್ದೆ ಬದಿ ಪತ್ತೆ: ಭಾನುವಾರ ಬೆಳಿಗ್ಗೆ ಕೆಡ್ಡಸ ಹಬ್ಬದ ಪ್ರಯಕ್ತ ಪುಂಡ ಹಕ್ಕಿಗಾಗಿ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾಗ ಮಹಮ್ಮದ್ ಅವರ ಮನೆಯ ಮೂಡುಬಿದಿಯ ಅವರದೇ ಗದ್ದೆಯಲ್ಲಿ ರುಂಡರಹಿತ ಅಸ್ಥಿಪಂಜರ ಕಂಡು ಬಂದು ಅದನ್ನು ಪರಿಶೀಲಿಸಿದಾಗ ಮಹಮ್ಮದ್ ಅವರದೇ ಮೃತದೇಹ ಎಂದು ಮನೆಯವರು ಗುರುತಿಸಿದ್ದಾರೆ.
ಮೃತದೇಹದ ಪಕ್ಕದಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದಿದ್ದು, ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿರಬೇಕೆಂದು ಪೋಲಿಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಆದರೇ ಅಸ್ಥಿಪಂಜರದ ಬಳಿ ಮೃತದೇಹದ ರುಂಡ ಇಲ್ಲದ್ದರಿಂದ ಸ್ಥಳೀಯ ಜನರು ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಪರಿಸರದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ವಿದ್ಯುತ್ ತಂತಿ ಕಡಿದು ಬಿದ್ದಿದ್ದರೂ ಮೆಸ್ಕಾಂ ಇಲಾಖಾ ಸಿಬ್ಬಂದಿ ಇತ್ತ ತಲೆ ಹಾಕದಿರುವ ಬಗ್ಗೆ ಮತ್ತು ಮನೆಯಿಂದ ಕೂಗಳತೆ ದೂರದಲ್ಲಿ ಮೃತದೇಹ ಇದ್ದರೂ ಕೊಳೆತ ವಾಸನೆ ಬಾರದ್ದ ಬಗ್ಗೆ ಉಡುಪಿ ಜಿಲ್ಲಾ ಜಡಿಎಸ್ ಕಾರ್ಯಾಧ್ಯಕ್ಷ ಗುಲಾಮ ಮಹಮ್ಮದ್ ಸಂಶಯ ವ್ಯಕ್ತ ಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಪಡುಬಿದ್ರಿ ಠಾಣಾಧಿಕಾರಿ ಮಹಾದೇವ ಶೆಟ್ಟಿ, ವೃತ್ತ ನಿರೀಕ್ಷಕ ಶಿವಾನಂದ ವಾಲೀಕರ್, ಮಣಿಪಾಲದ ಫೊರೋನ್ಸಿಕ್ ತಜ್ಞರು ಭೇಟಿ ನೀಡಿದ್ದಾರೆ.