ಶಿರ್ಲಾಲು: ಇಂದಿನಿಂದ ವಿಗ್ರಹಗಳ ಪ್ರತಿಷ್ಠಾ ಮಹೋತ್ಸವ, ಮಹಾಮಸ್ತಕಾಭಿಷೇಕ
ಮಂಗಳೂರು: ಕಾರ್ಕಳ ತಾಲೂಕಿನ ಶಿರ್ಲಾಲು ಅತಿಶಯ ಕ್ಷೇತ್ರ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿಯಲ್ಲಿ ನಿರ್ಮಿಸಿದ 11 ಅಡಿ ಎತ್ತರದ ನೂತನ ಭಗವಾನ್ ಶ್ರೀ ಆದಿನಾಥ, ಭರತ ಮತ್ತು ಬಾಹುಬಲಿ ಸ್ವಾಮಿಗಳ ವಿಗ್ರಹಗಳ ಪ್ರತಿಷ್ಠಾ ಪಂಚ ಕಲ್ಯಾಣ ಪೂರ್ವಕ ಮಹಾಮಸ್ತಕಾಭಿಷೇಕ ಮಹೋತ್ಸವ 11 ರಿಂದ 20ರವರೆಗೆ ನಡೆಯಲಿದೆ.
14 ರಂದು ಸಂಜೆ 5.35ರ ಕರ್ಕಾಟಕ ಲಗ್ನ ಸುಮುಹೂರ್ತದಲ್ಲಿ ಪೂಜ್ಯ 108 ಸುದೇಶ್ ಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯ, ನಾಡಿನ ಸಮಸ್ತ ಭಟ್ಟಾರಕರುಗಳ ಉಪಸ್ಥಿತಿಯಲ್ಲಿ ಗೌರವಾಧ್ಯಕ್ಷ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಶ್ರೀ ಸಿದ್ಧಗಿರಿ ಕ್ಷೇತ್ರದ ಉದ್ಘಾಟನೆ ನೆರವೇರಿಸುವುದರ ಮೂಲಕ ಲೋಕಾರ್ಪಣಾ ಕಾರ್ಯಕ್ರಮವು ನೆರವೇರಲಿದೆ.
ಪ್ರತಿಷ್ಠಾಪಕರಾದ ವಿನಂತಿ ಹಾಗೂ ರತ್ನವರ್ಮ ಪೂವಣಿ ದಂಪತಿ ನಿರ್ಮಿಸಿ, ಪ್ರತಿಷ್ಠಾಪಿಸಲ್ಪಟ್ಟ ಭವ್ಯ ತ್ರಿಮೂರ್ತಿಗಳ ದಿ ವ್ಯ ದರ್ಶನ ಕಾರ್ಯಕ್ರಮವು ನೆರವೇರಲಿದೆ.
ಹಲವು ಅಭಿವೃದ್ಧಿ ಕಾರ್ಯ: ಮಹಾಮಸ್ತಕಾಭಿಷೇಕದ ಯಶಸ್ಸಿನ ನಿಟ್ಟಿನಲ್ಲಿ ಕಾರ್ಯಾಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ, ಜನಪ್ರತಿನಿಧಿಗಳ ಮತ್ತು ದಾನಿಗಳ ಸಹಕಾರದೊಂದಿಗೆ ದಾಖಲೆ ಅವಧಿಯಲ್ಲಿ ತ್ಯಾಗಿ ಭವನ, ಶೌಚಾಲಯ ಸಮುಚ್ಛಯ, ಎತ್ತರದ ನೀರಿನ ಶೇಖರಣಾ ಘಟಕ, ನೀರು ಸರಬರಾಜಿನ ವ್ಯವಸ್ಥೆ, ಬಸದಿಯ ಪರಿಸರ ಸಿದ್ಧಗಿರಿ ಕ್ಷೇತ್ರ, ಬಸದಿಯ ಒಳಾಂಗಣದ ಮುಂಭಾಗ, ಬಸದಿಯ ಗೋಪುರದ ಮುಂಭಾಗಗಳಿಗೆ ಇಂಟರ್ಲಾಕ್ ಅಳವಡಿಸುವ ಕೆಲಸಗಳು ಭರದಿಂದ ಸಾಗುತ್ತಿದೆ.
ರಜತ ರಥ, ಯಾತ್ರಾ ಮಹೋತ್ಸವಕ್ಕಾಗಿ ನೂತನ ರಥಬೀದಿ ನಿರ್ಮಾಣ, ಸಭಾ ಚಪ್ಪರಕ್ಕಾಗಿ ವಿಶಾಲವಾದ ಸ್ಥಳ ನಿರ್ಮಾಣ, ಮಹೋತ್ಸವಗಳಲ್ಲಿ ಪಾಲ್ಗೊಳ್ಳುವ ಭಕ್ತಾಧಿಗಳ ಅನುಕೂಲಕ್ಕಾಗಿ ವಿಶಾಲವಾದ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ, ಹೀಗೆ ಈ ಚಾರಿತ್ರಿಕ ಪ್ರತಿಷ್ಠಾ ಮಹಾಮಸ್ತಕಾಭಿಷೇಕದ ಪೂರ್ವಭಾವಿ ಸಿದ್ಧತೆಗಳು ಅಚ್ಚುಕಟ್ಟಾಗಿ ನೆರವೇರುತ್ತಿದೆ.
ಒಟ್ಟು ವ್ಯವಸ್ಥೆಯನ್ನು ಯಶಸ್ವಿಯಾಗಿ ನೆರವೇರಿಸುವರೆ ಸುಮಾರು 23 ಸಮಿತಿಗಳನ್ನು ರಚಿಸಲಾಗಿದ್ದು, ಉಭಯ ಜಿಲ್ಲೆಗಳ ಅನುಭವಿಗಳ ಮಾರ್ಗದರ್ಶನದೊಂದಿಗೆ ಯುವಕರ ದಂಡು ಉತ್ಸಾಹದಿಂದ ಕಾರ್ಯೋನ್ಮುಖವಾಗಿದೆ.
ಬಸದಿಯ ಜೀರ್ಣೋದ್ಧಾರದ ಸಂದರ್ಭದಲ್ಲಿ ಸುಮಾರು 8 ವರ್ಷಗಳ ಹಿಂದೆ ನಿರ್ಮಾಣಗೊಂಡ ಸಿದ್ಧಲಕ್ಷ್ಮಿ ಸಭಾ ಭವನವನ್ನು ಮತ್ತಷ್ಟು ಮೂಲಭೂತ ಸೌಕರ್ಯಗಳೊಂದಿಗೆ ನವೀಕರಿಸಲಾಗಿದೆ. ಬಸದಿಯ ಸುತ್ತಣ ಪರಿಸರಗಳು ವೈಭವೀಕರಿಸುವ ಉದ್ದೇಶದಿಂದ ಹೈಮಾಸ್ಟ್ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗಿದೆ.