ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಂವೇದನಶೀಲ ಸಿನಿಮಾಗಳಿಂದ ಪರಿವರ್ತನೆ: ಡಾ.ಕದ್ರಿ ಯೋಗೀಶ್

Lingaraj Badiger
Updated On : 11 Feb 2013, 11:31 am

ಮಂಗಳೂರು:  ಗೊತ್ತುಗುರಿ ಇಲ್ಲದೆ ದೈನಂದಿನ ಜೀವನದಲ್ಲಿ ಓಡುತ್ತಿರುವ ನಮಗೆ ಸಂದೇಶ ಇರುವ ಸಂವೇದನ ಶೀಲ ಸಿನಿಮಾಗಳು ಒಳ್ಳೆಯತನದತ್ತ ಪ್ರಚೋದಿಸುತ್ತವೆ, ಹೃದಯಪರಿವರ್ತನೆಗೆ ಸಹಕಾರಿಯಾಗುತ್ತದೆ ಎಂದು ಖ್ಯಾತ ವೈದ್ಯ ಡಾ. ಕದ್ರಿ ಯೋಗೀಶ್ ಬಂಗೇರ ಹೇಳಿದ್ದಾರೆ.
ಸಹಮತ ಫಿಲಂ ಸೊಸೈಟಿ ಮತ್ತು ಎಸ್‌ಡಿಎಂ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸಹಯೋಗದೊಂದಿಗೆ ಭಾನುವಾರ ನಗರದಲ್ಲಿ ಚಲನಚಿತ್ರ ಉತ್ಸವ ಸಮಾರೋಪದಲ್ಲಿ ಅವರು ಮಾತನಾಡಿದರು.
ಡಾಕ್ಟರ್ ಅಂದರೆ ಮದ್ದು ಕೊಡುವುದು ಮಾತ್ರವಲ್ಲ, ಇದರರ್ಥ ಕಲಿಸು, ತಿಳಿವಳಿಕೆ ಮೂಡಿಸು. ಬಂಗಾರದ ಮನುಷ್ಯ, ಪುಟ್ಟಣ್ಣ ಕಣಗಾಲ್ ಅವರ ಶುಭಂಮಂಗಳ ಚಿತ್ರಗಳು ಜೀವನವನ್ನು ಕಲಿಸುತ್ತದೆ ಎಂದರು.
ಭಾರತೀಯ ಸಮಾಜದ ಚಿತ್ರಣ: ಸಿನಿಮಾ ಸಂಶೋಧಕ ಫಣಿರಾಜ್ ಮಾತನಾಡಿ, ಮಾಸ್ ಮತ್ತು ಕ್ಲಾಸ್ ವ್ಯಾಖ್ಯಾನ ಮೀರಿ ಭಾರತದಲ್ಲಿ 100 ವರ್ಷಗಳಲ್ಲಿ ಮೂಡಿ ಬಂದಿರುವ ವಿಶಿಷ್ಟ ಸಿನಿಮಾಗಳನ್ನು ಆಯ್ಕೆ ಮಾಡಿದ್ದೇವೆ. ಇದರಲ್ಲಿ ಬಹು ಸಿನಿಮಾಗಳು ಟಾಕೀಸ್‌ಗೆ ಬಂದಿಲ್ಲ, ಬಂದಿದ್ದರೂ ಹೆಚ್ಚು ದಿನ ನಡೆದಿಲ್ಲ. ಆದರೆ ಇವು ಭಾರತೀಯ ಸಮಾಜವನ್ನು ತೋರಿಸುತ್ತವೆ, ಮದರ್ ಇಂಡಿಯಾ, ನೀಚಾ ನಗರ್, ಅನುರಾಗ್ ಕಶ್ಯಪ್ ಅವರ ಗುಲಾಲ್, ರಿತುಪರ್ಣ ಘೋಷ್  ಅವರ ದಹನ್  ಚಿತ್ರಗಳು ನೈಜ ಚಿತ್ರಣ ನೀಡಿವೆ ಎಂದರು.
ಸಾಹಿತಿ ಬಿ.ಎಂ.ರೋಹಿಣಿ ಸಮಾರೋಪ ಭಾಷಣ ಮಾಡಿದರು. ಪ್ರಾಂಶುಪಾಲ ದೇವರಾಜ್, ವಿಜಯ್ ವಿಕ್ಟರ್ ಲೋಬೊ ಇದ್ದರು. 15 ಸಿನಿಮಾಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡವು,. ಈ ಎಲ್ಲ ಸಿನಿಮಾ ನೋಡಿದ ರಾಗಿಣಿ ಮತ್ತು ಸೀತಾರಾಮ ರಾವ್ ಅನಿಸಿಕೆ ತಿಳಿಸಿದರು.
ಸದಭಿರುಚಿ ಚಿತ್ರಗಳನ್ನು ಯುವಜನತೆ ನೋಡಲಿ: ಕಲಾತ್ಮಕ ಚಿತ್ರ ಪ್ರದರ್ಶಿಸುವ ಕೆಲಸ ಸಾಕಪ್ಪಾ ಸಾಕು ಎಂಬ ಭಾವ ಮೂಡಿಸುತ್ತದೆ. ಇದನ್ನು ಪ್ರದರ್ಶಿಸುವ ಉಮೇದು ಕಡಿಮೆಯಾಗುತ್ತಿದೆ. ಸದಸ್ಯರ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಯುವಕರು ಸದಭಿರುಚಿಯ ಕಲಾತ್ಮಕ ಚಿತ್ರಗಳನ್ನು ನೋಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ರಂಗಭೂಮಿ ಹಾಗೂ ಸಿನಿಮಾ ನಿರ್ದೇಶಕ ಸದಾನಂದ ಸುವರ್ಣ ಹೇಳಿದರು.
 ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿನಿಮಾಗಳ ಮೂಲಕ ದೇಶ, ಸಂಸ್ಕೃತಿ, ಸಮುದಾಯದ ಪಲ್ಲಟ ಅರಿಯಲು ಸಾಧ್ಯ. ನಿರ್ಮಾಪಕರು ಕೇವಲ ಲಾಭದ, ವಾಣಿಜ್ಯ ದೃಷ್ಟಿಕೋನ ಇಟ್ಟುಕೊಳ್ಳಬಾರದು. ಹಾಗೆಂದು ವಾಣಿಜ್ಯ ಚಿತ್ರಗಳು ಕೆಟ್ಟವು ಎಂದರ್ಥವಲ್ಲ. ಇಲ್ಲಿ ಸದಭಿರುಚಿ ಚಿತ್ರಗಳಿಗೆ ವಿದ್ಯಾರ್ಥಿಗಳೇ ಪ್ರೇಕ್ಷಕರು. ಕಲಾತ್ಮಕ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಬೇಕು.
 ಎಸ್‌ಡಿಎಂ ಶಿಕ್ಷಣ ಸಂಸ್ಥೆ ಸದಭಿರುಚಿ ಚಿತ್ರಗಳನ್ನು ನೋಡುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರ ಎಂದರು.
 ಚಿತ್ರೋತ್ಸವ ಉದ್ಘಾಟಿಸಿದ ಪ್ರಾಂಶುಪಾಲ ಡಾ.ದೇವರಾಜ್ ಕೆ. ಮಾತನಾಡಿ, ಇಂಟರ್ನೆಟ್ ಯುಗದಲ್ಲಿ ಸಿನಿಮಾ ನೋಡಲು ಯಾರಿಗೂ ಪುರುಸೊತ್ತು ಇಲ್ಲ. ಆದರೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳ್ಳಲು ಸದಭಿರುಚಿ ಚಿತ್ರಗಳನ್ನು ನೋಡುವುದು ಅವಶ್ಯಕ. ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ 3 ವರ್ಷಗಳಿಂದ ಚಲನಚಿತ್ರೋತ್ಸವ ಆಚರಿಸುತ್ತಿದ್ದೇವೆ ಎಂದರು. ಮಣಿಪಾಲ ಎಂಐಟಿ ಪ್ರಾಧ್ಯಾಪಕ ಫಣಿರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement