ಹೋರಾಡಿದ್ದು ಮೂಲ್ಕಿಗೆ, ಮೂಡಿದ್ದು ಮೂಡುಬಿದಿರೆ
-ಪ್ರಕಾಶ್ ಮೂಲ್ಕಿ
ಮೂಲ್ಕಿ: ಸ್ವಾತಂತ್ರ್ಯ ಪೂರ್ವದಲ್ಲೇ ಬಂದರು, ಪೊಲೀಸ್ ಠಾಣೆ, ನ್ಯಾಯಾಲಯ, ಉಪ ನೋಂದಾವಣೆ ಕಚೇರಿ ಸೇರಿದಂತೆ ತಾಲೂಕು ಸ್ಥಾನಮಾನ ಹೊಂದಿದ್ದ ಮೂಲ್ಕಿ ತಾಲೂಕಿನ ಕನಸು ಈಡೇರದೇ ಇರುವುದು ಸ್ಥಳೀಯರ ಭಾರಿ ನಿರಾಸೆಗೆ ಕಾರಣವಾಗಿದೆ.
ಸ್ವಾತಂತ್ರ್ಯೋತ್ತರದಲ್ಲಿ ನ್ಯಾಯಾಲಯ ಸೇರಿದಂತೆ ಇದ್ದಂತಹ ಸವಲತ್ತುಗಳನ್ನು ಕಳೆದುಕೊಳ್ಳುತ್ತ ಬಂದಿದೆ. ಜೊತೆಗೆ ಮೂಲ್ಕಿ- ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರವಾಗಿದ್ದ ಕ್ಷೇತ್ರವು ಈಗ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ಮಾಜಿ ಶಾಸಕರಾದ ಡಾ ದಾಮೋದರ್ ಮೂಲ್ಕಿ, ಕೆ. ಸೋಮಪ್ಪ ಸುವರ್ಣರ ಬಳಿಕ ಮೂಲ್ಕಿಯಿಂದ ವಿಧಾನ ಸಭಾ ಸದಸ್ಯ ಅಭ್ಯರ್ಥಿಗಳಿಲ್ಲದಿರುವದೇ ಮುಖ್ಯ ಕಾರಣವಾಗಿದೆ. ಕೆ. ಅಮರನಾಥ ಶೆಟ್ಟಿ ಅಧಿಕಾರದ ಅವಧಿಯಲ್ಲಿ ಕಾರ್ಕಳ ತಾಲೂಕಿನಲ್ಲಿದ್ದ ಮೂಡುಬಿದಿರೆಯನ್ನು ಮಂಗಳೂರು ತಾಲೂಕಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದು ಜೊತೆಗೆ ಅರಣ್ಯ, ಕೃಷಿ ಇಲಾಖೆ, ಅಗ್ನಿಶಾಮಕ ದಳ ಸೇರಿದಂತೆ ಪ್ರಮುಖ ಇಲಾಖೆಗಳ ಕಚೇರಿಗಳನ್ನು ಮೂಡುಬಿದಿರೆಯಲ್ಲಿ ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ.
ಬಳಿಕ ಹ್ಯಾಟ್ರಿಕ್ ಜಯ ಗಳಿಸಿದ ಕೆ ಅಭಯಚಂದ್ರ ಜೈನ್ ತಮ್ಮ ಅವಧಿಯಲ್ಲಿ ಮೂಡುಬಿದಿರೆಯಲ್ಲಿ ನ್ಯಾಯಾಲಯ ಸ್ಥಾಪನೆ, ವಿಶೇಷ ತಹಸೀಲ್ದಾರ್ ನೇಮಕ ಸೇರಿದಂತೆ ತಾಲೂಕು ರಚನೆಗೆ ಪೂರಕವಾದ ಎಲ್ಲಾ ಮೂಲ ಸೌಕರ್ಯಗಳನ್ನು ಯೋಜಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಭಜನೆಯಾದಾಗ ಸಾಧ್ಯವಿತ್ತು: ಅವಿಭಜಿತ ದ.ಕ. ಜಿಲ್ಲೆ ವಿಭಜಿಸುವ ಸಂದರ್ಭ ಹೊಸ ತಾಲೂಕು ರಚನೆಯಾಗುತ್ತಿದ್ದಲ್ಲಿ ಮೂಲ್ಕಿ ತಾಲೂಕು ರಚನೆ ಸಾಧ್ಯವಿತ್ತು. ಮೂಲ್ಕಿ ಸಮೀಪದ ಹೆಜಮಾಡಿ, ಪಡುಬಿದ್ರಿ, ಫಲಿಮಾರುಗಳನ್ನು ಸೇರಿಸಿ ಮೂಲ್ಕಿ ತಾಲೂಕು ರಚನೆ ಸಂಭವವಿತ್ತು. ಆದರೆ ದಿಢೀರ್ ಉಡುಪಿ ಜಿಲ್ಲೆ ರಚನೆಯಾದ್ದರಿಂದ ಮೂಲ್ಕಿ ತಾಲೂಕು ರಚನೆಗೆ ಪೂರಕ ಕ್ಷೇತ್ರ ವಿಸ್ತೀರ್ಣದ ಕೊರತೆ ಎದುರಿಸಿದೆ. ಹುಂಡೇಕರ್, ಗದ್ದಿಗೆ ಗೌಡರ್ ಮತ್ತು ವಾಸುದೇವ ರಾವ್ ಸಮಿತಿ ಮೂಲ್ಕಿ ತಾಲೂಕು ರಚನೆಗೆ ಒತ್ತು ನೀಡಿದ್ದು, ಆ ಬಳಿಕ ತಾಲೂಕು ರಚನೆಗೆ ನೇಮಕಗೊಂಡ ಎಂ.ಬಿ. ಪ್ರಕಾಶ್ ನೇತೃತ್ವದ ಸಮಿತಿಯ ಮೂಲ್ಕಿ ಕೈಬಿಟ್ಟಿದೆ. ಮೂಡುಬಿದಿರೆ ತಾಲೂಕು ರಚನೆಗೆ ಪ್ರಸ್ತಾವನೆ ಸಲ್ಲಿಸಿದ್ದು ಅದರಂತೆ ರಚನೆಯಾಗಿದೆ.
ಮೂಲ್ಕಿ ತಾಲೂಕು ಸಾಧ್ಯ: ಮಂಗಳೂರು ತಾಲೂಕು ವಿಸ್ತೀರ್ಣವಾಗಿರುವುದರಿಂದ ಎಂ. ಬಿ ಪ್ರಕಾಶ್ ವರದಿಯಲ್ಲಿ ಮಂಗಳೂರು ತಾಲೂಕನ್ನು ಭವಿಷ್ಯದ ದೃಷ್ಟಿಯಲ್ಲಿ ಮಂಗಳೂರು ಹಾಗೂ ಮಂಗಳೂರು ಗ್ರಾಮಾಂತರ ತಾಲೂಕಾಗಿ ಮಾಡಬೇಕೆಂದು ಪ್ರಸ್ತಾವನೆ ಸಲ್ಲಿಸಿದೆ. ಇದರಲ್ಲಿ ಮೂಲ್ಕಿ ಹೋಬಳಿಯನ್ನು ಮಂಗಳೂರು ತಾಲೂಕಿನಲ್ಲೇ ಉಳಿಸಿ ಸುರತ್ಕಲ್ ಪರಿಸರದ ಕಾಟಿಪಳ್ಳ, ಚೇಳಾಯರು, ಕೃಷ್ಣಾಪುರ ಪ್ರದೇಶಗಳು, ಬಜಪೆ ಪರಿಸರದ ಪ್ರದೇಶಗಳನ್ನು ಸೇರಿಸಿಕೊಂಡು ಮಂಗಳೂರು ಗ್ರಾಮಾಂತರ ತಾಲೂಕನ್ನು ಮೂಲ್ಕಿ ತಾಲೂಕನ್ನಾಗಿ ರಚಿಸುವಂತೆ ಸರ್ಕಾರದ ಮೇಲೆ ತೀವ್ರ ಹೋರಾಟದ ಮೂಲಕ ಒತ್ತಡ ತಂದಲ್ಲಿ ಮೂಲ್ಕಿ ತಾಲೂಕು ರಚನೆ ಸಾಧ್ಯವಿದೆ.