ಇಂದು ಹಿಂಜಾವೇ ಪ್ರತಿಭಟನೆ
ಮಂಗಳೂರು: ಕುಳಾಯಿ ಕೋಡಿಕೆರೆ ನಿವಾಸಿ ಶಿವರಾಜ್ ಹತ್ಯೆಯ ನೈಜ ಆರೋಪಿಗಳನ್ನು ಬಂಧಿಸಬೇಕು ಹಾಗೂ ಮಂಗಳೂರಿನಲ್ಲಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾ ವಿರುದ್ಧ ಫೆ.12ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಹಿಂದೂ ಜಾಗರಣಾ ವೇದಿಕೆ ಮಂಗಳೂರು ಮಹಾನಗರ ಮತ್ತು ಕುಳಾಯಿ ನಾಗರಿಕ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ.
ಇಂದು ಉಪನ್ಯಾಸ
ಮಂಗಳೂರು: ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಆಶ್ರಯದಲ್ಲಿ 'ದೀರ್ಘಕಾಲಿನ ಅಭಿವೃದ್ಧಿಗೆ ಉತ್ಪಾದಕತೆ ಮತ್ತು ಸಂಶೋಧನೆಯ ಬೆಳವಣಿಗೆ' ಕುರಿತು ದಿ.ವಿಶ್ವನಾಥ ಕಾಮತ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮ ಫೆ.12ರಂದು ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಸಂಜೆ 6ಕ್ಕೆ ನಡೆಯಲಿದೆ ಎಂದು ಕೌನ್ಸಿಲ್ ಅಧ್ಯಕ್ಷೆ ಉಮಾ ರಾವ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೆನರಾ ಚೇಂಬರ್ ಮಾಜಿ ಅಧ್ಯಕ್ಷೆ ಲತಾ ಕಿಣಿ ಅಧ್ಯಕ್ಷತೆಯಲ್ಲಿ ಉದ್ಯಮಿ ಮೋಹನ ಕಾಮತ್ ಉದ್ಘಾಟಿಸುವರು. ಕರ್ಣಾಟಕ ಬ್ಯಾಂಕ್ ಕೊಡಿಯಾಲಬೈಲ್ ಶಾಖೆಯ ಮುಖ್ಯ ಪ್ರಬಂಧಕ ಸುಮನಾ ಘಾಟೆ ಅಧ್ಯಕ್ಷತೆ ವಹಿಸುವರು ಎಂದರು.
ಇಂದಿನಿಂದ ರಜತ ಮಹೋತ್ಸವ
ಪುತ್ತೂರು: ಶ್ರೀ ಗುರುರಾಘವೇಂದ್ರ ಮಠ ಕಲ್ಲಮದ ರಜತಮಹೋತ್ಸವ ಮತ್ತು ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭ 12ರಿಂದ 15ರವರೆಗೆ ನಡೆಯಲಿದೆ ಎಂದು ಉಪನ್ಯಾಸಕ ಬಿ.ವಿ. ಸೂರ್ಯನಾರಾಯಣ ಹೇಳಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವು ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಭೀಮೇಶ್ವರ ಜೋಶಿ ಇವರ ಉಪಸ್ಥಿತಿಯಲ್ಲಿ ನಡೆಯಲಿದೆ. ನವಗ್ರಹ ವನದ ಉದ್ಘಾಟನೆಯನ್ನು ಮಾಜಿ ಲೋಕಸಭಾ ಸದಸ್ಯ ವಿನಯಕುಮಾರ್ ಸೊರಕೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ 'ಶ್ರೀ ಗುರು' ಎಂಬ ಸ್ಮರಣ ಸಂಚಿಕೆಯನ್ನು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಬಿಡುಗಡೆ ಮಾಡಲಿದ್ದಾರೆ ಎಂದರು.
ಇಂದು ನಡಿಬೆಟ್ಟು ಜಾತ್ರೆ
ಬೆಳ್ತಂಗಡಿ: ಸುಲ್ಕೇರಿ ಮೊಗ್ರು ಗ್ರಾಮದ ನಡಿಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಫೆ.12ರಂದು ನಡೆಯಲಿದೆ.