ಎಂಡೋ ಸಂತ್ರಸ್ತರಿಗೆ ಪರಿಹಾರ ಎಂದೋ?
ಜಿತೇಂದ್ರ ಕುಂದೇಶ್ವರ
ಮಂಗಳೂರು: ಜಿಲ್ಲಾಧಿಕಾರಿ ಬಹಿರಂಗವಾಗಿ ಘೋಷಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5221 ಮಂದಿ ಎಂಡೋ ಪೀಡಿತರು. ಆದರೆ, ಜಿಲ್ಲಾ ಆರೋಗ್ಯ ಇಲಾಖೆ ಲೆಕ್ಕ 1907! ಎಂಡೋ ಪೀಡಿತರ ಪುನರ್ವಸತಿ ಮತ್ತು ಪರಿಹಾರಕ್ಕೆ 25 ಕೋಟಿ ಬೇಕು ಎಂದು ಲೆಕ್ಕಾಚಾರ ಮಾಡಿ ಜಿಲ್ಲಾ ಆರೋಗ್ಯ ಇಲಾಖೆ ಸೂಚಿಸಿದರೆ, ರಾಜ್ಯ ಸರ್ಕಾರ ಘೋಷಿಸಿದ್ದು 2 ಕೋಟಿ!
30 ಸಾವಿರ ಮಂದಿ ಕಾರ್ಡ್ ಚಳವಳಿ ನಡೆಸಿದಾಗ ಜಿಲ್ಲಾ ಉಸ್ತುವಾರಿ ಸಚಿವರು ಬಂದು ಕೇರಳಕ್ಕಿಂತ ಉತ್ತಮ ಪ್ಯಾಕೇಜ್ ಭರವಸೆ ನೀಡಿದರು. ರಾಜ್ಯೋತ್ಸವ ವೇಳೆ ಮುಖ್ಯಮಂತ್ರಿ ಮನೆಗೆ ಎಂಡೋ ಸಂತ್ರಸ್ತರನ್ನು ಕರೆದುಕೊಂಡು ಹೋಗಬೇಕು ಎನ್ನುವಾಗ ಆರೋಗ್ಯ ಸಚಿವ ಅರವಿಂದ ಲಿಂಬಾಳಿ ಎಂಡೋಪಾಲನೆ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರಗಳಿಗೆ ತಲಾ 1 ಕೋಟಿ ನೀಡುವುದಾಗಿ ಹೇಳಿದರು. ಜ.26ರಂದು ಗಣರಾಜ್ಯೋತ್ಸವದಂದು ಎಂಡೋ ಸಂತ್ರಸ್ತರು ಮುಖ್ಯಮಂತ್ರಿ ಮನೆಗೆ ಹೋಗಲು ಸಿದ್ಧತೆ ಮಾಡಿದ್ದರು ಆಗ ಶಾಸಕರ ರಾಜೀನಾಮೆ ಪರ್ವ ಶುರುವಾದ್ದರಿಂದ ಹಿಂದೆ ಸರಿದರು.
'ರಾಜ್ಯ ಸರ್ಕಾರ ಸಂತ್ರಸ್ತರಿಗೆ ನೀಡಲು ಚಿಲ್ಲರೆ ನಾಣ್ಯ ಸಂಗ್ರಹಿಸುತ್ತಿದೆ. ಸಂತ್ರಸ್ತರಿಗೆ ಭಿಕ್ಷೆ ಬೇಡ, ಹಕ್ಕಿನ ಮಾಸಾಶನ ನೀಡಿ' ಎನ್ನುತ್ತಾರೆ ಎಂಡೋ ಪೀಡಿತ ಮತ್ತು ಹೋರಾಟಗಾರ ಶ್ರೀಧರ ಗೌಡ.
ಕಾಂಗ್ರೆಸ್ ಮುಖಂಡರು ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರದಿಂದ ಪರಿಹಾರ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ. ಆದರೆ ಕೇರಳದಲ್ಲಿ ಎಂಡೋ ಸಂತ್ರಸ್ತರು ಪರಿಹಾರ ಕೇಳುವಾಗ ಕೇಂದ್ರ ಸರ್ಕಾರ ಕೈ ಎತ್ತಿದೆ. '1994ರಿಂದ ಕೀಟನಾಶಕ ವೈಮಾನಿಕ ಸಿಂಪಡಣೆಯನ್ನು ನಿಷೇಧಿಸಿದ್ದು, ನಾವು ಪರಿಹಾರ ನೀಡುವುದು ಸಮಂಜಸವಲ್ಲ' ಎಂದು ಕೇಂದ್ರ ಸರ್ಕಾರ ಕೇರಳ ಹೈಕೋರ್ಟ್ನಲ್ಲಿ ಅಫಿಡವಿಟ್ ಹಾಕಿದೆ. ಇದು ಕರ್ನಾಟಕಕ್ಕೂ ಅನ್ವಯವಾಗುತ್ತದೆ.
'ಎಂಡೋ ಪೀಡಿತರ ಬಗ್ಗೆ 45 ನಿಮಿಷದ ಡಾಕ್ಯುಮೆಂಟರಿ ಮಾಡಿದ್ದೇನೆ. ಇದನ್ನು ನಗರದಲ್ಲಿ ಪ್ರದರ್ಶಿಸುತ್ತೇವೆ. ಇದನ್ನು ರಾಜಕೀಯ ಪಕ್ಷಗಳು ಚುನಾವಣೆ ಪ್ರಣಾಳಿಕೆ ಮಾಡಬೇಕು' ಎನ್ನುತ್ತಾರೆ.
ಶಾಸಕರು ತುಟಿ ಬಿಚ್ಚದ್ದು ದುರ್ದೈವ: ಅಧಿವೇಶನದಲ್ಲಿ ಎಂಡೋ ಸಂತ್ರಸ್ತರ ಪರವಾಗಿ ದನಿ ಎತ್ತಿದ್ದು ಬೆಂಗಳೂರು ಶಾಸಕರು. ನಾವೇ ಮತ ಹಾಕಿ ಕಳುಹಿಸಿದ ಇಲ್ಲಿನ ಬಿಜೆಪಿ, ಕಾಂಗ್ರೆಸ್ ಶಾಸಕರು ಯಾರೂ ತುಟಿ ಬಿಚ್ಚಿಲ್ಲ, ಇದು ನಮ್ಮ ದುರ್ದೈವ ಎಂದು ಶ್ರೀಧರ ಗೌಡ ವ್ಯಥೆ ಹೊರಗೆಡಹುತ್ತಾರೆ.
ಬಜೆಟ್ ಮುನ್ನಾದಿನ ಶಾಸಕ ರವಿ ಸುಬ್ರಹ್ಮಣ್ಯ ಪ್ರಶ್ನೆಗೆ ಆರೋಗ್ಯ ಸಚಿವ ಲಿಂಬಾವಳಿ ಉತ್ತರಿಸುತ್ತಾ, ಮಾಧ್ಯಮಗಳ ಆಧಾರವಾಗಿಟ್ಟು ಕೊಂಡು ಕೇರಳಕ್ಕಿಂತ ಒಳ್ಳೆ ಪ್ಯಾಕೇಜ್ ರಾಜ್ಯದ ಸಂತ್ರಸ್ತರಿಗೆ ಕೊಡುತ್ತೇವೆ. ಪ್ರತಿ ತಿಂಗಳು ಮಾಸಾಶನ ನೀಡುತ್ತೇವೆ ಹೇಳಿದ್ದರು. ಬಜೆಟ್ ದಿನ ಬೆಳ್ತಂಗಡಿ ಪರಿಸರದಲ್ಲಿ ಕರೆಂಟ್ ಇಲ್ಲದಿದ್ದರೂ ಹೋರಾಟಗಾರರು, ಸಂತ್ರಸ್ತರ ಮನೆಯವರು ಇನ್ವಾಲ್ಟರ್ ಬಳಸಿ ಟೀವಿ ನೋಡಿದರು. ಆದರೆ ಅವರ ಕನಸು ಛಿದ್ರವಾಯಿತು. 'ಎಂಡೋ ವಿಚಾರ ರಾಜಕೀಯಗೊಳಿಸಿಯಾದರೂ ಸಂತ್ರಸ್ತರ ಬದುಕಲ್ಲಿ ಬೆಳಕು ಮೂಡಿಸಬೇಕಿದೆ' ಎಂದು ಸಂಜೀವ ಕಬಕ ಪುತ್ತೂರು ವೇದನೆಯಿಂದ ಹೇಳುತ್ತಾರೆ.
ಸಿಎಂ ಸರ್ಕ್ಯೂಟ್ ಹೌಸ್ಗೆ ಕರೆಸಿದ್ದರು!: 4 ತಿಂಗಳ ಹಿಂದೆ ಸಂತ್ರಸ್ತರ ಪರಿಸ್ಥಿತಿ ಪರಿಶೀಲನೆಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜಿಲ್ಲಾಧಿಕಾರಿ ಮೂಲಕ ಅಲಂಕಾರು, ಕೊಕ್ಕಡದ 4 ಸಂತ್ರಸ್ತ ಕುಟುಂಬಗಳನ್ನು ಮಂಗಳೂರಿನ ಸರ್ಕ್ಯೂಟ್ ಹೌಸ್ಗೆ ಕರೆಸಿದ್ದರು. ಅಂದು ಅವರ ಮನಸ್ಸೂ ಮಿಡಿದಿತ್ತು. ಆದರೆ ಬಜೆಟ್ ಮಾಡುವಾಗ ಮರೆತಿತ್ತು.
'ಎಲ್ಲೆಲ್ಲಿ ಗೇರು ತೋಟ ಇದೆ. ಅಲ್ಲಿಯೂ ಸಮೀಕ್ಷೆ ಮಾಡಿ. ಹಿಂದೆ ಸಮೀಕ್ಷೆ ಮಾಡಿದ ಗ್ರಾಮಗಳಲ್ಲಿ ಸಂತ್ರಸ್ತರು ಬಿಟ್ಟು ಹೋಗಿದ್ದರೆ ಮತ್ತೆ ಮಾಡಿ ಎಂದು ಆರೋಗ್ಯ ಸಚಿವರು ಆದೇಶಿಸಿದ್ದಾರೆ. ಸದ್ಯಕ್ಕೆ 1907 ಸಂತ್ರಸ್ತರು ಎಂದು ಸರ್ಕಾರ ಹೈಕೋರ್ಟ್ಗೆ ಮಾಹಿತಿ ಸಲ್ಲಿಸಿದೆ. ಇದು ಅಂತಿಮ ಅಲ್ಲ' ಎನ್ನುತ್ತಾರೆ ಆರೋಗ್ಯಾಧಿಕಾರಿ ಒ. ಶ್ರೀರಂಗಪ್ಪ.
ಪ್ರಾಥಮಿಕ ಸಮೀಕ್ಷೆಯಲ್ಲಿ 5221 ಎಂದು ಜಿಲ್ಲಾಧಿಕಾರಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ ಅದು 1907ಕ್ಕೆ ಇಳಿದಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಎಂಡೋ ಪೀಡಿತ ಪ್ರದೇಶದ ಯುವತಿಯರು ಮದುವೆಯಾಗಿ ಹೋಗಿದ್ದರೂ ಸಮೀಕ್ಷೆಯಲ್ಲಿ ಸೇರ್ಪಡೆ ಮಾಡಿಲ್ಲ. ಇದನ್ನು ಆರೋಗ್ಯಾಧಿಕಾರಿ ಕೂಡಾ ಒಪ್ಪುತ್ತಾರೆ. ಒಟ್ಟಾರೆ ಎಂಡೋ ಸಂತ್ರಸ್ತರಿಗೆ ಪರಿಹಾರ ಮರೀಚಿಕೆಯಾಗಿಯೇ ಉಳಿದಿದೆ.