ಕುಂದಾಪುರ ಸುತ್ತಮುತ್ತ ವಿದ್ಯುತ್ ವ್ಯತ್ಯಯ
ಮಂಗಳೂರು: 110/11 ಕೆ.ವಿ. ನಾವುಂದ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಬಡಾಕೆರೆ ಫೀಡರ್ನ ವಾಹಕ ಬದಲಾವಣೆ ಕಾಮಗಾರಿ ನಿಮಿತ್ತ ಫೆ.12, 13, 14ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರದೇಶಗಳು: ಬಡಾಕೆರೆ, ನಾಡ, ಪಡುಕೋಣೆ, ಹಡವು, ಸೇನಾಪುರ, ಹಕ್ಲಾಡಿ, ಕುಂದಬಾರಂದಾಡಿ, ಬಗ್ವಾಡಿ ಸುತ್ತಮುತ್ತಲಿನ ಪ್ರದೇಶಗಳು.
ಆನೆಕಾಲು ರೋಗ
ನಿಯಂತ್ರಣ ಕಾರ್ಯಕ್ರಮ
ಉಡುಪಿ: ಫೆ.12ರಂದು ರಾಷ್ಟ್ರೀಯ ಆನೆ ಕಾಲು ರೋಗ ನಿಯಂತ್ರಣ ಕಾರ್ಯಕ್ರಮವನ್ನು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅಂದು ಬೆಳಿಗ್ಗೆ 8.30ಕ್ಕೆ ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್ ಚಾಲನೆ ನೀಡಲಿದ್ದಾರೆ ಎಂದು ಕಾರ್ಯಕ್ರಮದ ಉಸ್ತುವಾರಿ ಡಾ. ಅಶೋಕ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕ್ಯೂಲೆಕ್ಸ್ ಎಂಬ ಸೊಳ್ಳೆಯಿಂದ ಹರಡುವ ಆನೆಕಾಲು ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದಕ್ಕೆ ಪ್ರತಿ ವರ್ಷದ ಹಾಗೆ ಈ ವರ್ಷವೂ ಡಿಇಸಿ ಮತ್ತು ಆಲ್ಬೆಂಡಾಜೋಲ್ ಗುಳಿಗೆಗಳನ್ನು ಫೆ.12ರಂದು ನೀಡಲಾಗುವುದು. ಜಿಲ್ಲೆಯಲ್ಲಿ ಪ್ರತಿ ಮನೆಗಳ ಸದಸ್ಯರಿಗೆ ಹಂಚಲು 5,000 ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಮುಖ್ಯವಾಗಿ ಶಿಕ್ಷಣ ಸಂಸ್ಥೆಗೆ ನೀಡಿದ ಮಾತ್ರೆಗಳನ್ನು ಶಿಕ್ಷಕರು ಮಕ್ಕಳಿಗೆ ಶಾಲೆಯಲ್ಲಿ ಏಕಕಾಲಕ್ಕೆ ನೀಡುವಂತೆ ಈ ಸಂದರ್ಭದಲ್ಲಿ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಸುಮಾರು 12,74,488 ಜನರಲ್ಲಿ ವಯಸ್ಸಿಗೆ ಅನುಗುಣವಾಗಿ ಈ ಮಾತ್ರಗಳನ್ನು ನೀಡಲಾಗುವುದು ಎಂದ ಅವರು ಸಾಮೂಹಿಕ ಔಷಧ ನೀಡಿಕೆ ಕಾರ್ಯಕ್ರಮವನ್ನು ಸಾಮೂಹಿಕ ಔಷಧ ನುಂಗಿಸುವ ಕಾರ್ಯಕ್ರಮವಾಗಿ ಮಾರ್ಪಾಡು ಮಾಡಿದ್ದೇವೆ. ಇದರ ಮುಖ್ಯ ಉದ್ದೇಶ ಎಲ್ಲರೂ ಏಕಕಾಲಕ್ಕೆ ಮಾತ್ರೆಗಳನ್ನು ನುಂಗುವುದು, ಇಲ್ಲದಿದ್ದಲ್ಲಿ ಕೆಲವರು ಮಾತ್ರೆಗಳನ್ನು ಪಡೆದು ನುಂಗದೇ ಎಸೆಯುವ ಸಾಧ್ಯತೆಗಳಿರುತ್ತವೆ ಎಂದವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯಧಿಕಾರಿ ಡಾ. ರಾಮಚಂದ್ರ ಬಾಯರಿ ಉಪಸ್ಥಿತರಿದ್ದರು.