ಪಳ್ಳಿಗದ್ದೆ ನಕ್ಸಲ್ ಪೀಡಿತ ಕುಟುಂಬಗಳ ಸ್ಥಳಾಂತರ ವಿಚಾರ ಚರ್ಚೆ
ಸುಳ್ಯ: ಕುಲ್ಕುಂದ ಸಮೀಪದ ಪಳ್ಳಿಗದ್ದೆ ನಕ್ಸಲ್ ಪೀಡಿತ ಪ್ರದೇಶದ ಕುಟುಂಬಗಳ ಸ್ಥಳಾಂತರಕ್ಕೆ ನಿವೇಶನ ಕೊಡುವ ಕುರಿತಂತೆ ಚರ್ಚೆ ನಡೆಯುತ್ತಿರುವಾಗ ಆಡಳಿತ ಪಕ್ಷ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದ ಘಟನೆ ಶುಕ್ರವಾರ ನಡೆದ ಸುಳ್ಯ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಹರೀಶ್ ರೈ ದೇರಂಪಾಲು, ಸ್ಥಾಯಿ ಸಮಿತಿ ಅಧ್ಯಕ್ಷೆ ಭಾಗ್ಯ ಪ್ರಸನ್ನ ಉಪಸ್ಥಿತರಿದ್ದರು.
ಕುಲ್ಕುಂದ ಸಮೀಪದ ಪಳ್ಳಿಗದ್ದೆ ನಕ್ಸಲ್ ಪೀಡಿತ ಪ್ರದೇಶಗಳ ಕುಟುಂಬಗಳು ತಮ್ಮನ್ನು ಸ್ಥಳಾಂತರಿಸುವಂತೆ ಕೋರಿದ ಮನವಿಯ ಕುರಿತ ನಿರ್ಣಯದ ಬಗ್ಗೆ ಚರ್ಚೆ ನಡೆದಾಗ ಉತ್ತರಿಸಿದ ತಹಸೀಲ್ದಾರ್ ವೈದ್ಯನಾಥ್, ಈಗಾಗಲೇ ಅವರಿಗೆ ಸೂಚಿಸಲಾದ ಸ್ಥಳದಲ್ಲಿ ಸ್ವಲ್ಪ ವಿವಾದವಿದೆ. ಆ ಸ್ಥಳದವರು ಒಪ್ಪಿದರೆ ನೀಡಬಹುದು ಎಂದರು.
ಮಾತಿನ ಚಕಮಕಿ: ಈ ವೇಳೆ ಮಾತನಾಡಿದ ನಾಮ ನಿರ್ದೇಶಿತ ಸದಸ್ಯ ರಾಧಾಕೃಷ್ಣ ಬೊಳ್ಳೂರು ಕಾನೂನಿನ ತೊಡಕುಗಳನ್ನು ವಿವರಿಸತೊಡಗಿದರು. ಇದರಿಂದ ಸಿಟ್ಟಿಗೆದ್ದ ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್ ತಹಸೀಲ್ದಾರ್ ಹೇಳಬೇಕಾದ ಉತ್ತರವನ್ನು ನೀವು ಹೇಳಬೇಡಿ ಎಂದರು. ಇದರಿಂದ ಕೆರಳಿದ ಬೊಳ್ಳೂರು, ನನ್ನ ಅನುಮಾನಗಳನ್ನು ಸಭೆಯ ಎದುರಿಗಿಟ್ಟಿದ್ದೇನೆ. ಇಲ್ಲಿ ಮಾತನಾಡಲು ನನಗೂ ಅವಕಾಶವಿದೆ ಎಂದು ಪ್ರತ್ಯುತ್ತರ ನೀಡಿದರು.
ಇದು ಆಡಳಿತ ಮತ್ತು ವಿಪಕ್ಷದವರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು. ಬೊಳ್ಳೂರು ಬೆಂಬಲಕ್ಕೆ ನಿಂತ ಅಧ್ಯಕ್ಷೆ ಗುಣವತಿ, ಮುಳಿಯ ಕೇಶವ ಭಟ್ ಮಾತನಾಡಿ, ಅವರು ಮಾತನಾಡುತ್ತಿರುವಾಗ ಮಧ್ಯ ಪ್ರವೇಶಿಸಿ ಮಾತನಾಡುವುದು ಸರಿಯಲ್ಲ ಎಂದರು. ಕಾಮತ್ ಬೆಂಬಲಕ್ಕೆ ಬಂದ ವಿಮಲಾ ರಂಗಯ್ಯ, ಅನಿಲ್ ರೈ ಮೊದಲಾದವರು ಇದನ್ನು ಹೇಳಬೇಕಾದವರು ತಹಸೀಲ್ದಾರರು. ಅವರು ಹೇಳಿದರೆ ನಾವು ಕೇಳುತ್ತೇವೆ ಎಂದು ಹೇಳಿದರು.
ಬೆಳ್ಳಾರೆ ಗ್ರಾ. ಪಂ. ತೊಳಪಟ್ಟ ಜಾಗದ ಗೇರು ನೆಡುತೋಪಿನಲ್ಲಿ ಈಗ ಗೇರು ಬೆಳೆಯುತ್ತಿಲ್ಲವಾದುದರಿಂದ ಅದನ್ನು ನಿವೇಶನ ಮಾಡಿ ಹಂಚಬೇಕು. ಆದರೆ ಅದಕ್ಕೆ ಕಾಣದ ಕೈಗಳು ಅಡ್ಡಿ ಉಂಟುಮಾಡಿತ್ತಿದೆ ಎಂದು ಅನಿಲ್ ರೈ ಆರೋಪಿಸಿದರು. ಈ ಕುರಿತಂತೆ ಸ್ಥಳ ಪರಿಶೀಲನೆ ನಡೆಸಬೇಕೆಂದು ಜಿ.ಪಂ. ಸದಸ್ಯೆ ಆಶಾ ತಿಮ್ಮಪ್ಪ ಹೇಳಿದರು.
ಅಧಿಕಾರಿ ನಾಪತ್ತೆ: ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಬೇಕಿದ್ದ ಅಧಿಕಾರಿ ಸಭೆಯಲ್ಲಿರಲಿಲ್ಲ. ಫೋನಾಯಿಸಿದಾಗ ಸ್ವಿಚ್ ಆಫ್ ಉತ್ತರ ಬಂತು. ನಮ್ಮ ತಾಲೂಕಿನ ಹಲವು ಅಧಿಕಾರಿಗಳ ಮೊಬೈಲ್ಗಳಿಗೆ ಫೋನ್ ಮಾಡಿದಾಗ ಸ್ವಿಚ್ ಆಫ್ ಎಂದೇ ಬರುತ್ತಿದೆ. ಹೀಗಾದರೆ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಹೇಗೆ ಎಂದು ಅನಿಲ್ ರೈ ಕೇಳಿದರು. ಏನೆಕಲ್ಲಿನ ಕ್ರೀಡಾಪಟು ಸಹನಾರಿಗೆ ರಾಜ್ಯಮಟ್ಟದ ಪೈಕಾ ಕ್ರೀಡಾಕೂಟದಲ್ಲಿ ಅನ್ಯಾಯ ಆಗಿದೆ ಎಂಬ ಆರೋಪದ ಬಗ್ಗೆ ಈ ಸಭೆಯಲ್ಲಿ ವಿವರಣೆ ನೀಡಿದ ಕಾರ್ಯ ನಿರ್ವಹಣಾಧಿಕಾರಿ ಮಲ್ಲೇಸ್ವಾಮಿ ಆಕೆ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸದೆ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗೆದ್ದುಕೊಂಡಿದ್ದಳು. ಇದನ್ನು ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟು ಆಕ್ಷೇಪಿಸಿದುದರಿಂದ ಆಕೆಗೆ ರಾಜ್ಯಮಟ್ಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು ಎಂದು ಹೇಳಿದರು.