ಮತದಾರರ ಗುರುತುಚೀಟಿಯಲ್ಲಿ 'ಲಿಂಗ ಪರಿವರ್ತನೆ', ಪ್ರೇತವಾದ್ಳು ಯುವತಿ!
ಸುಂಟಿಕೊಪ್ಪ: 'ಯಾವ ಹೂವು ಯಾರ ಮುಡಿಗೋ... ಯಾರ ಒಲವು ಯಾರ ಕಡೆಗೋ...' ಚಲನಚಿತ್ರವೊಂದರ ಈ ಹಾಡು ಹಳೆಯದು. ಇದೀಗ ಚುನಾವಣಾ ಆಯೋಗದ ಬೇಜವಾಬ್ದಾರಿ ನಿರ್ವಹಣೆಯಿಂದ ಇಲ್ಲಿನ ಮತದಾರರು 'ಯಾರ ಚೀಟಿ ಯಾರ ಹೆಸರಿಗೋ... ಯಾರ ಫೋಟೊ ಇನ್ಯಾರದೋ ಚೀಟಿಗೋ...?' ಎಂದು ಕೇಳುವಂತಾಗಿದೆ.
ಚುನಾವಣಾ ಆಯೋಗ ಈ ಭಾಗದಲ್ಲಿ ವಿತರಿಸುತ್ತಿರುವ ಮತದಾರರ ಚೀಟಿಯಲ್ಲಿ ಯಾರದೋ ಮತದಾರರ ಹೆಸರು ಇನ್ಯಾರದೋ ಹೆಸರಿನಲ್ಲಿದೆ. ಮೂಲ ಮತದಾರರ ಭಾವಚಿತ್ರ ಇರಬೇಕಾದಲ್ಲಿ ಮತ್ತಿನ್ಯಾರದೋ ಭಾವಚಿತ್ರವಿದೆ. ಮತದಾರರಿಗೆ ಸಂಬಂಧಪಟ್ಟ ಊರಿನ ಬದಲಿಗೆ ಸಂಬಂಧಪಡದ ಊರಿನ ಹೆಸರು ನಮೂದಾಗಿದೆ.
ಉದ್ದೇಶಕ್ಕೇ ಕೊಡಲಿಯೇಟು: ಕಳ್ಳ ಮತದಾನ ಮಾಡುವದನ್ನು ತಪ್ಪಿಸಲು ಮತ್ತು ಸರಕಾರದ ಸವಲತ್ತುಗಳನ್ನು ಹೊಂದಿಕೊಳ್ಳಲು ಪ್ರಮುಖ ಆಧಾರವಾಗಿರಲು ಅನುಕೂಲವಾಗುವಂತೆ ಆಯೋಗದ ಮಾಜಿ ಅಧ್ಯಕ್ಷ ಟಿ.ಎನ್. ಶೇಷನ್ ಈ ವ್ಯವಸ್ಥೆ ಪರಿಚಯಿಸಿದರು. ಆದರೆ ಇದೀಗ ತಪ್ಪುಗಳೊಂದಿಗೆ ಮುದ್ರಣವಾಗುತ್ತಿರುವ ಚೀಟಿಗಳು ಮೂಲ ಆಶಯಕ್ಕೇ ಧಕ್ಕೆ ತರುವಂತಿವೆ.
ಹೀಗಿವೆ ಅವಾಂತರಗಳು: ಜಯಚಂದ್ರ ಎಸ್. ಎಂಬ ಮತದಾರರ ತಂದೆಯ ಹೆಸರು ಸುಂದರ ಎಂ. (ಗುರುತಿನ ಚೀಟಿ ಸಂಖ್ಯೆ-ಯು.ಟಿ.ಜೆಡ್. 3257177). ಜಯಚಂದ್ರ ಭಾವಚಿತ್ರ ಮುದ್ರಣ ಸರಿ ಇದೆ.
ವಿಚಿತ್ರವೆಂದರೆ ಇವರ ಭಾವಚಿತ್ರವನ್ನೇ ಬಳಸಿ ಅಬ್ದುಲ್ ನಿಸಾರ್ ಪಿ.ಎಚ್. (ಸಂ.-ಯು.ಟಿ.ಜೆಡ್. 3257458) ಮತ್ತು ಅಬ್ದುಲ್ ಆರೇಫ್ (ಸಂ-ಯು.ಟಿ.ಜೆಡ್. 3257136) ಎಂಬ ಹೆಸರಿನಲ್ಲಿ ಮತದಾರರ ಗುರುತಿನ ಚೀಟಿ ವಿತರಿಸಲಾಗಿದೆ.
ಕೊಡಗಿನಲ್ಲಿ ಭದ್ರಾವತಿ: ರವಿ ಆರ್. ತಂದೆ ರಚಯ್ಯ (ರಾಚಯ್ಯ) ಉಲುಗುಲಿ ಗ್ರಾಮದ ನಿವಾಸಿ. ಆದರೆ ಇವರ ವಾಸಸ್ಥಳವನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಎಂದು ದಾಖಲಿಸಲಾಗಿದೆ.
ಸರ್ಕಾರಿ ದಾಖಲೆಗಳಲ್ಲಿ ಸುಂಟಿಕೊಪ್ಪದ ಕೆಲವು ಕ್ಷೇತ್ರದ ಹೆಸರು ಉಲುಗುಲಿ ಎಂದು ನಮೂದಾಗಿದ್ದರೂ, ಇದಕ್ಕೆ ವ್ಯತಿರಿಕ್ತವಾಗಿ ಉಳುಗಾಳಿ, ಊರ್ಗಳ್ಳಿ, ಉಲುಗಿಳಿ ಎಂಬಿತ್ಯಾದಿ ಪದಗಳಿಂದ ಕೂಡಿವೆ.
ಪ್ರೇತವಾದ ಯುವತಿ: ಯುವತಿಯೋರ್ವಳ ಮೂಲ ಹೆಸರು ಪ್ರೀತಾ. ಎಲ್ಲೆಡೆ ಈಕೆ ತನ್ನ ಹೆಸರನ್ನು ಪ್ರೀತಾ ಎಂದು ನಮೂದಿಸುತ್ತಿದ್ದಾಳೆ. ಆದರೆ ಈಕೆಗೆ ವಿತರಿಸಲಾಗಿರುವ ಮತದಾರರ ಚೀಟಿಯಲ್ಲಿ ಇವಳನ್ನು ಪ್ರೇತಾ ಎಂದು ಬಿಂಬಿಸಲಾಗಿದೆ.
ಊರಿನ ಹೆಸರಿನಲ್ಲಿ ತಂದೆ: ಶೋಭಾ ಎಂಬಾಕೆಯ ಗುರುತಿನ ಚೀಟಿಯಲ್ಲಿ ತಂದೆಯ ಹೆಸರು ಇರಬೇಕಾದಲ್ಲಿ ಪಿರಿಯಾಪಟ್ಟಣ ಊರಿನ ಹೆಸರು ನಮೂದಾಗಿದೆ.
ಲಿಂಗಪರಿವರ್ತನೆ: ಇಷ್ಟೆಲ್ಲಾ ಆವಾಂತರಗಳ ನಡುವೆ ಲಿಂಗ ಪರಿವರ್ತನೆಯ ಶಸ್ತ್ರಚಿಕಿತ್ಸೆ ಕೂಡ ನಡೆದಿದೆ! ಮೂಲ ಮತದಾರರು ಪುರುಷ/ಮಹಿಳೆ ಆಗಿದ್ದರೂ ಕೂಡ ಇದಕ್ಕೆ ತದ್ವಿರುದ್ಧವಾದ ಹೆಸರು ಕಂಡುಬಂದಿದೆ.
ಸುಂಟಿಕೊಪ್ಪದ ಯುವತಿಯೋರ್ವಳ ಹೆಸರು ತಪ್ಪಾಗಿ ಮುದ್ರಣಗೊಂಡಿರುವ ಹಿನ್ನೆಲೆ ಆಕೆ ಪಾಸ್‌ಪೋರ್ಟ್ ಹೊಂದಲು ಅಸಾಧ್ಯವಾಗಿ ವಿದೇಶದಲ್ಲಿ ಉನ್ನತ ಹುದ್ದೆ ಪಡೆಯುವ ಅವಕಾಶದಿಂದ ವಂಚಿತಳಾಗಿದ್ದಾಳೆ.
ಪ್ರತ್ಯೇಕ ವಿಭಾಗ ಬೇಕು: ಗೊಂದಲಗಳ ಕುರಿತು 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಬಿ.ಭಾರತೀಶ್, ಈ ರೀತಿಯ ಅದ್ವಾನಗಳಿಂದ ಕೂಡಿದ ಚೀಟಿ ಕೊಂಡೊಯ್ದು ಮತ ಚಲಾಯಿಸುವದಾದರೂ ಹೇಗೆ? ಎಂದು ಪ್ರಶ್ನಿಸುತ್ತಾರೆ.
ಕ್ರಮಕ್ಕೆ ಆಗ್ರಹ: ತಾಲೂಕು ಪಂಚಾಯಿತಿ ಪಿ.ಎಂ. ಲತೀಫ್ ಪ್ರತಿಕ್ರಿಯಿಸಿ, ಅಧಿಕಾರಿಗಳ ನಿರ್ಲಕ್ಷ್ಯವೇ ಅವಾಂತರಕ್ಕೆ ಕಾರಣವಾಗಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಗ್ರಹಿಸಿದ್ದಾರೆ. ಚುನಾವಣೆಗೆ ಮುಂಚಿತವಾಗಿ ದೋಷಪೂರಿತ ಮತದಾರರ ಚೀಟಿಗಳನ್ನು ಹಿಂದಕ್ಕೆ ಪಡೆದುಕೊಂಡು ಲೋಪರಹಿತ ಗುರುತಿನ ಚೀಟಿ ವಿತರಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎ. ಉಸ್ಮಾನ್ ಆಗ್ರಹಿಸಿದ್ದಾರೆ.
ಹೊರಗುತ್ತಿಗೆಯಿಂದ ಸಮಸ್ಯೆ
ಗುರುತು ಚೀಟಿ ಮುದ್ರಿಸುವ ಕೆಲಸವನ್ನು ಹೊರಗುತ್ತಿಗೆಗೆ ನೀಡಲಾಗುತ್ತಿದೆ. ಆದರೆ ವೃತ್ತಿಕ್ಷಮತೆಗಿಂತ ಹಣದಾಸೆಗೆ ಗುತ್ತಿಗೆಪಡೆದ ಖಾಸಗಿ ಗುತ್ತಿಗೆದಾರರು ಉದ್ದೇಶಪೂರ್ವಕವಾಗಿ ಲೋಪದೋಷಗಳನ್ನೊಳಗೊಂಡ ಚೀಟಿ ಮುದ್ರಿಸುತ್ತಿದ್ದಾರೆ. ಇದರಿಂದ ಪುನಃ ತಿದ್ದುಪಡಿಗೆ ಅವರ ಬಳಿಗೆ ಹೋಗಬೇಕಾಗಿರುವುದರಿಂದ ಜನರ ಹಣ ಪೋಲು ಮಾಡಲಾಗುತ್ತದೆ. ಅಪರಾಧಿಗಳು ನ್ಯಾಯಾಲದ ಕಣ್ಣಿಗೆ ಮಣ್ಣೆರೆಚಬಹುದಾದ ಸಾಧ್ಯತೆ ಅಲ್ಲಗೆಗಳೆಯುವಂತಿಲ್ಲ.
-ಎ.ಲೋಕೇಶ್ ಕುಮಾರ್, ನ್ಯಾಯವಾದಿ.