ಮನೆ ಭತ್ಯೆ ತಾರತಮ್ಯ ಖಂಡಿಸಿ ನಾಳೆ ಶಿಕ್ಷಕರಿಂದ ಸಾಂಕೇತಿಕ ಧರಣಿ
ಮಂಗಳೂರು: ಈ ವರ್ಷದ ಆಯವ್ಯಯ ಮಂಡನೆ ಸಂದರ್ಭ, ಕೇವಲ ಬೆಂಗಳೂರು ನಗರಕ್ಕೆ ಸೀಮಿತವಾಗಿ ಈಗಿರುವ ಮನೆ ಬಾಡಿಗೆ ಭತ್ಯೆಯನ್ನು ಶೇ.25ರಿಂದ 30ಕ್ಕೆ ಹೆಚ್ಚಿಸಿದ್ದು ಗ್ರಾಮೀಣ ಭಾಗದ ಶಿಕ್ಷಕರ ಸಹಿತ ನೌಕರರನ್ನು ಕಡೆಗಣಿಸಲಾಗಿದೆ. ಈ ತಾರತಮ್ಯ ಖಂಡಿಸಿ ರಾಜ್ಯ ಉಪನ್ಯಾಸಕರ ಕ್ರಿಯಾ ಸಮಿತಿಯ ದ.ಕ.ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಬೆಳಗ್ಗೆ 10.30ರಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಯಲಿದೆ.
ಸರ್ಕಾರದ ನಿರ್ಧಾರದಿಂದ ಬೆಂಗಳೂರು ನಗರದ ನೌಕರ ಸಮುದಾಯಕ್ಕೆ ಮಾತ್ರ ಅನುಕೂಲವಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಕಾರ್ಯ ಮಾಡುವ ಐದು ಲಕ್ಷ ಶಿಕ್ಷಕರು, ನೌಕರರನ್ನು ಸರ್ಕಾರ ಕಡೆಗಣಿಸಿದೆ ಎಂದು ಸಂಘ ಆರೋಪಿಸಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ನೌಕರರಿಗೆ ಶೇ.30, ಶೇ.20, ಶೇ.10ರಷ್ಟು ಮನೆ ಬಾಡಿಗೆ ನೀಡಿ ಸಮಾನತೆ ಕಾಪಾಡಿದೆ.
ಈಗ, ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುವ ನೌಕರರಿಗೆ ಕೇಂದ್ರ ಸರ್ಕಾರ ಮಾದರಿಯಲ್ಲಿ ಶೇ.30ರ ಮನೆ ಬಾಡಿಗೆ ಭತ್ಯೆ ನೀಡಿದೆ. ಇದೇ ರೀತಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಶಿಕ್ಷಕರಿಗೆ ಶೇ.20 ಮತ್ತು ಶೇ.10ರಷ್ಟು ಮನೆ ಬಾಡಿಗೆ ಭತ್ಯೆ ನೀಡಬೇಕು ಎಂದು ಸಂಘ ಆಗ್ರಹಿಸಿದೆ. ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢಶಾಲೆ ಸಹ ಶಿಕ್ಷಕರು, ಪ.ಪೂ. ಉಪನ್ಯಾಸಕರಿಗೆ ಈಗ ನೀಡುವ ವಿಶೇಷ ವೇತನ ಮೂಲ ವೇತನದಲ್ಲಿ ವಿಲೀನಗೊಳಿಸಬೇಕು ಇತ್ಯಾದಿ ಬೇಡಿಕೆಗಳನ್ನೂ ಸಂಘ ಸರ್ಕಾರ ಮುಂದಿಟ್ಟಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಶಿವಶಂಕರ ಭಟ್ ಕೆ., ಕಾರ್ಯದರ್ಶಿ ರಾಮಕೃಷ್ಣ ಮಲಾರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಶಿರೂರು, ಉಪನ್ಯಾಸಕರ ಸಂಘದ ಪಾಧಿಕಾರಿ ಬೆಳ್ಳಿಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.