ಮೂಲ್ಕಿ, ಹೆಬ್ರಿ ತಾಲೂಕಾಗಲಿ: ಜೈನ್, ಭಂಡಾರಿ ಪ್ರತಿಭಟನೆ
ವಿಧಾನಸಭೆ: ತಾಲೂಕು ರಚನೆ ಸಂದರ್ಭದಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಮೂಲ್ಕಿ ಮತ್ತು ಹೆಬ್ರಿಯನ್ನು ಕೈಬಿಡಲಾಗಿದೆ ಎಂದು ಕಾಂಗ್ರೆಸ್‌ನ ಅಭಯಚಂದ್ರ ಜೈನ್ ಮತ್ತು ಗೋಪಾಲ್ ಭಂಡಾರಿ ಅವರು ಪ್ರತಿಭಟನೆ ನಡೆಸಿದರು. ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆ ಮೂಲ್ಕಿ ಮತ್ತು ಹೆಬ್ರಿ ತಾಲೂಕುಗಳಾಗಬೇಕು ಎಂಬ ಫ್ಲೆಕ್ಸ್‌ಗಳನ್ನು ಹಿಡಿದುಕೊಂಡಿದ್ದ ಇಬ್ಬರೂ ಸರ್ಕಾರ ಈ ವಿಚಾರದಲ್ಲಿ ಅನ್ಯಾಯ ಮಾಡಿದೆ. ಮೂಲ್ಕಿ ಮತ್ತು ಹೆಬ್ರಿಗೆ ತಾಲೂಕುಗಳಾಗುವ ಎಲ್ಲಾ ಅವಕಾಶವಿದ್ದರೂ ಸರ್ಕಾರ ಅದನ್ನು ಪರಿಗಣಿಸಿಲ್ಲ ಎಂದು ಆರೋಪಿಸಿದರು.
ಸರ್ಕಾರ ನೇಮಿಸಿದ ತಾಲೂಕು ರಚನಾ ಸಮಿತಿ ನೀಡಿರುವ ವರದಿಯಲ್ಲಿ ಹೆಬ್ರಿಯನ್ನು ತಾಲೂಕು ಎಂದು ಘೋಷಿಸಬೇಕು ಎಂದು ಹೇಳಿದೆ. ಆದರೂ ಅದನ್ನು ಕಡೆಗಣಿಸಿರುವ ಸರ್ಕಾರ ನಮಗೆ ಅನ್ಯಾಯ ಮಾಡಿದೆ. ಆದರೆ, ಉತ್ತರ ಕರ್ನಾಕದ ವಿಚಾರದಲ್ಲಿ ತೋರಿದ ಔದಾರ್ಯವನ್ನು ನಮಗೆ ತೋರಿಸಿಲ್ಲ ಎಂದು ಆರೋಪಿಸಿದರು.
ಒಂದು ಹಂತದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗೋಪಾಲ್ ಭಂಡಾರಿ, ಕೂಡಲೇ ಹೆಬ್ರಿಯನ್ನು ತಾಲೂಕು ಎಂದು ಘೋಷಿಸುವಂತೆ ಆಗ್ರಹಿಸಿ ಸಭಾಧ್ಯಕ್ಷರ ಪೀಠದ ಎದುರು ಧಾವಿಸಿ ಧರಣಿ ಆರಂಭಿಸಿದರು. ನಂತರ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ ಸಬಾಧ್ಯಕ್ಷ ಕೆ.ಜಿ. ಬೋಪಯ್ಯ ಸದಸ್ಯರನ್ನು ಸಮಾಧಾನಪಡಿಸಿದರು.