ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮೂಲ್ಕಿಗೆ ವಿಶೇಷ ತಹಸೀಲ್ದಾರ್ ನೇಮಿಸಲು 10 ದಿನ ಗಡುವು

Lingaraj Badiger
Updated On : 12 Feb 2013, 11:45 am

ಮೂಲ್ಕಿ: ನಾಲ್ಕು ದಶಕಗಳಿಂದ ಮೂಲ್ಕಿ ತಾಲೂಕು ರಚನೆ ಹೋರಾಟ ನಡೆಯುತ್ತಿದ್ದು ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆ ಹಾಗೂ ಜನಪ್ರತಿನಿಧಿಗಳ ತಾರತಮ್ಯದಿಂದಾಗಿ ಮೂಲ್ಕಿ ಬದಲು ಮೂಡುಬಿದಿರೆ ತಾಲೂಕಾಗಿ ರಚನೆಯಾಗಿದೆ. ಮೂಲ್ಕಿ ತಾಲೂಕು ಬಗ್ಗೆ ಉಗ್ರ ಪ್ರತಿಭಟನೆ ಅಗತ್ಯ ಎಂದು ಮೂಲ್ಕಿ ತಾಲೂಕು ಹೋರಾಟ ನಡೆಸುತ್ತಿರುವ ನಿವೃತ್ತ ಶಿಕ್ಷಕ ಗುಂಡಾಲಗುತ್ತು ಮಹಾಬಲ ಶೆಟ್ಟಿ ಹೇಳಿದ್ದಾರೆ.
 ಮೂಲ್ಕಿ ತಾಲೂಕು ಮತ್ತು ನ್ಯಾಯಾಲಯ ಹೋರಾಟ ಸಮಿತಿ ನೇತೃತ್ವದಲ್ಲಿ ಮೂಲ್ಕಿ ತಾಲೂಕು ರಚನೆಗೆ ಒತ್ತಾಯಿಸಿ ಮೂರು ದಿನ ಮೂಲ್ಕಿ ಬಸ್ ನಿಲ್ದಾಣದ ಬಳಿ ಜರಗಲಿರುವ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒತ್ತಡ ತಂತ್ರ ಅಗತ್ಯ: ಹುಂಡೇಕರ್, ಗದ್ದಿಗೆ ಗೌಡರ್ ಹಾಗೂ ವಾಸುದೇವ ರಾವ್ ಸಮಿತಿ ಮೂಲ್ಕಿ ತಾಲೂಕು ರಚನೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಬಳಿಕ ಉಡುಪಿ ಜಿಲ್ಲೆ ವಿಭಜನೆಗೊಂಡಿದ್ದರಿಂದ ಮೂಲ್ಕಿ ತಾಲೂಕು ರಚನೆಗೆ ಹಿನ್ನಡೆಯಾಗಿದ್ದು ಮೂಲ್ಕಿ ಹೋಬಳಿಯು 32 ಗ್ರಾಮಗಳನ್ನೊಳಗೊಂಡಿದ್ದು ತಾಲೂಕು ರಚನೆ ಸಾಧ್ಯ. ಈ ಬಗ್ಗೆ ಜನಪ್ರತಿನಿಧಿಗಳು ಒತ್ತಡ ಹಾಕಬೇಕೆಂದು ಅವರು ಹೇಳಿದರು.
ವಿಶೇಷ ತಹಸೀಲ್ದಾರ್ ನೇಮಿಸಿ: ಮೂಲ್ಕಿಗೆ ವಿಶೇಷ ತಹಶೀಲ್ದಾರ್‌ರನ್ನು ಕೂಡಲೇ ನೇಮಕ ಮಾಡಬೇಕು. 10 ದಿನಗಳ ಒಳಗೆ ನೇಮಕ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಹಾಗೂ ಮುಂದಿನ ಚುನಾವಣೆಗಳಲ್ಲಿ ಮೂಲ್ಕಿ ಹೋಬಳಿಯಲ್ಲಿ ಮತದಾನ ಬಹಿಷ್ಕಾರ ಮಾಡುವ ಪ್ರಸ್ತಾವನೆ ಇದೆ. ಇನ್ನು ಮುಂದಿನ ದಿನಗಳಲ್ಲಿ ಮೂಲ್ಕಿ ತಾಲೂಕು ರಚನೆ ಬಗ್ಗೆ ತೀವ್ರ ಹೋರಾಟ ನಡೆಸುವುದಾಗಿ ಸಮಿತಿಯ ಹರೀಶ್ ಪುತ್ರನ್ ತಿಳಿಸಿದರು.
ಸಮಿತಿಯ ಭುವನಾಭಿರಾಮ ಉಡುಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯೆ ವನಿತಾ ಅಮೀನ್, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ,  ಮಾಜಿ ಅಧ್ಯಕ್ಷ ಬಿ.ಎಂ. ಆಸೀಫ್ ಮತ್ತಿತರರು ಭಾಗವಹಿಸಿದ್ದರು. ಸಂಜೆ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಧರಣಿಯಲ್ಲಿ ಭಾಗವಹಿಸಿದರು.
ಸದನದಲ್ಲಿ ಪ್ರಸ್ತಾಪ: ಮೂಲ್ಕಿ ತಾಲೂಕು ರಚನೆ ಬಗ್ಗೆ ವಿಧಾನಸಭೆಯಲ್ಲಿ ಶಾಸಕ ಕೆ. ಅಭಯಚಂದ್ರ ಜೈನ್ ಸೋಮವಾರ ಪ್ರಸ್ತಾಪಿಸಿ, ಮೂಲ್ಕಿಯಲ್ಲಿ ತಾಲೂಕು ರಚನೆ ಬಗ್ಗೆ ತೀವ್ರ ರೀತಿಯಲ್ಲಿ ಹೋರಾಟ ನಡೆಯುತ್ತಿದ್ದು ಜನರು ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಕೂಡಲೇ ಮೂಲ್ಕಿ ತಾಲೂಕು ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement