ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಲೆಕ್ಕ ಸಹಾಯಕ ಸಿಬ್ಬಂದಿ ವ್ಯರ್ಥ ತರಬೇತಿ ರದ್ದು

Lingaraj Badiger
Updated On : 12 Feb 2013, 11:52 am

ಮಂಗಳೂರು: ಮೇಲಧಿಕಾರಿಗಳ ಆದೇಶವನ್ನು ಕಣ್ಮುಚ್ಚಿ ಪಾಲನೆ ಮಾಡಿದ ಕಿರಿಯ ಅಧಿಕಾರಿಗಳಿಂದಾಗಿ ಎರಡನೇ ಬಾರಿಗೆ ತರಬೇತಿಗೆ ಆಗಮಿಸಿದ್ದ ಗ್ರಾಮ ಪಂಚಾಯ್ತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ವಾಪಸ್ ಕಳುಹಿಸಲಾಗಿದೆ.
 ಒಮ್ಮೆ ತರಬೇತಿ ಪಡೆದವರಿಗೆ ವ್ಯರ್ಥವಾಗಿ ಅದೇ ತರಬೇತಿ ನೀಡುತ್ತಿರುವ ಬಗ್ಗೆ 'ಅಧಿಕಾರಿಗಳಿಂದ ಕಣ್ಮುಚ್ಚಿ ಅದೇಶ ಪಾಲನೆ, ಲೆಕ್ಕ ಸಹಾಯಕರಿಗೆ ಮತ್ತೊಮ್ಮೆ ತರಬೇತಿ' ಎಂಬ ವಿಶೇಷ ವರದಿ ಕನ್ನಡಪ್ರಭದಲ್ಲಿ ಸೋಮವಾರ ಪ್ರಕಟವಾಗಿತ್ತು.
 14 ಮಂದಿ ಸೋಮವಾರ ಬೆಳಗ್ಗೆ ಕುಲಶೇಖರದ ಜಿಲ್ಲಾ ತರಬೇತಿ ಕೇಂದ್ರಕ್ಕೆ ಹಾಜರಾದರು.'ತರಬೇತಿಗೆ ಯಾರನ್ನು ಆಯ್ಕೆ ಮಾಡಿದ್ದೇವೆ ಎಂದು ತಾಲೂಕು ಪಂಚಾಯ್ತಿಯಿಂದ ಪಟ್ಟಿ ಕೊಟ್ಟಿಲ್ಲ, ಸಂಖ್ಯೆ ಮಾತ್ರ ಕೊಟ್ಟಿದ್ದಾರೆ. ಈಗಾಗಲೇ ತರಬೇತಿ ಪಡೆದಿರುವ ಹಿನ್ನೆಲೆಯಲ್ಲಿ ನೀವೆಲ್ಲರೂ ವಾಪಸ್ ಹೋಗಿ' ಎಂದು ತರಬೇತಿದಾರರು ಸೂಚಿಸಿದರು. ಆದರೆ ತರಬೇತಿ ಪಡೆಯುವಂತೆ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಆದೇಶ ನೀಡಿದ್ದಾರೆ, ನೀವು ಇಲ್ಲಿಗೆ ಬಂದ ಬಗ್ಗೆ ವರದಿ ನೀಡುವಂತೆ ನೌಕರರ ಒತ್ತಾಯಿಸಿದರು.
 '12 ಸಿಬ್ಬಂದಿ ಪ್ರಾಥಮಿಕ ಗಣಕಯಂತ್ರ ತರಬೇತಿ ಪಡೆದಿದ್ದಾರೆ. 2 ಮಂದಿ ಪಡೆದಿಲ್ಲ, ಸೋಮವಾರ ಮಧ್ಯಾಹ್ನ ಎಲ್ಲರನ್ನು ಬಿಡುಗಡೆಗೊಳಿಸಿದ್ದೇವೆ, ಇಬ್ಬರಿಗೆ 18ರಂದು ತರಬೇತಿಗೆ ಹಾಜರಾಗಲು ತಿಳಿಸಲಾಗಿದೆ' ಎಂದು ಬರೆದುಕೊಟ್ಟರು. ನೌಕರರು ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಡಿಟಿಐ ಕೇಂದ್ರದಲ್ಲಿ ಡಿಟಿಐ ಪ್ರಾಂಶುಪಾಲರ ಆಗಮನಕ್ಕೆ ಕಾದು ಕುಳಿತಿದ್ದರು. ಅವರು ಬಂದು ವರದಿಗೆ ಸಹಿ ಹಾಕಿದ ಬಳಿಕ ಎಲ್ಲ ನೌಕರರು ಅಲ್ಲಿಂದ ಹೊರಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement