ವಿದೇಶದಲ್ಲಿ ಪುತ್ರಗೆ ಸಂಕಷ್ಟ; ಹೆತ್ತವರು
ಮಂಗಳೂರು: ಕತಾರ್ ದೋಹಾದ ಸ್ಪೇಸ್ ಟ್ರೇಡಿಂಗ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಮಗ ರಚನ್ ಡಿಸೋಜ ಅಪಘಾತದಿಂದ ಮೂಲೆ ಸೇರಿದ್ದು, ಆತನನ್ನು ಸಂಪರ್ಕಕ್ಕೆ ಸಿಗದಂತೆ ಮಾಡಿದ್ದಾರೆ ಎಂದು ಹೆತ್ತವರು ಆರೋಪಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ತಾಯಿ ರೂಫೀನ್ ಡಿಸೋಜ, ಒಂದೂವರೆ ವರ್ಷದ ಹಿಂದೆ ಮಗನನ್ನು ಖ್ಯಾತ ಉದ್ಯಮಿ ಜೆರಾಲ್ಡ್ ಲೋಬೊ ರಚನ್ ಕ್ರಶರ್ ಉದ್ಯೋಗಕ್ಕೆ ಕತಾರ್‌ಗೆ ಕರೆದೊಯ್ದಿದ್ದರು. ಕೆಲಸ ಮಾಡುತ್ತಿದ್ದ ವೇಳೆ ಮಗನಿಗೆ ಸಣ್ಣ ಅಪಘಾತವಾಯಿತು, ಈ ಅಪಘಾತದಿಂದ ಕಿಡ್ನಿಗೆ ಗಾಯವಾದ್ದರಿಂದ ಶಸ್ತ್ರ ಚಿಕಿತ್ಸೆ ಮಾಡಬೇಕಿದೆ. ಖರ್ಚನ್ನು ಕಂಪನಿಯೇ ಭರಿಸುವುದಾಗಿ ಹೇಳಿದೆ. ಗಂಭೀರ ಗಾಯವಾಗಿರುವುದರಿಂದ ಕಂಪನಿ ದಿನ ದೂಡುತ್ತಿದ್ದು, ಮಗನಿಂದ ಮೊಬೈಲ್ ಸಂಪರ್ಕ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮುನೀರ್ ಕಾಟಿಪಳ್ಳ, ದಯಾನಂದ, ಸಿಲ್ವೆಸ್ಟರ್ ಡಿಸೋಜ, ಯೂನಿಸ್ ಡಿಸೋಜ, ರಸ್ಲಿನಾ ಡಿಸೋಜ ಇದ್ದರು.
ಪಾಷಾಣ ಸೇವಿಸಿ ಮಗು ಸಾವು
ಸುಳ್ಯ: ಇಬ್ಬರು ಚಿಕ್ಕ ಮಕ್ಕಳು ಟೂತ್‌ಪೇಸ್ಟ್ ಎಂದು ಭಾವಿಸಿ ಇಲಿ ಪಾಷಾಣ ಬಾಯಿಗೆ ಹಾಕಿದ ಪರಿಣಾಮ ಮೂರೂವರೆ ವರ್ಷದ ಮಗು ಮೃತಪಟ್ಟು 8 ತಿಂಗಳು ಪ್ರಾಯದ ಇನ್ನೊಂದು ಗಂಭೀರ ಸ್ಥಿತಿ ತಲುಪಿದ ಘಟನೆ ಇಲ್ಲಿನ ಎಡಮಂಗಲ ಗ್ರಾಮದಲ್ಲಿ ಸಂಭವಿಸಿದೆ. ಧೃತಿ ಮೃತಳು. ಎಡಮಂಗಲ ಗ್ರಾಮದ ಎರಿಂಬಿಲ ಮೋಹನ ಗೌಡ-ಮಂಜುಳಾ ದಂಪತಿ ಮನೆಯ ಪಕ್ಕದಲ್ಲಿ ಹೊಸ ಮನೆಯ ಕೆಲಸ ಕಾರ್ಯದಲ್ಲಿ ತಲ್ಲೀನರಾಗಿರುವಾಗ ಅವರ ಇಬ್ಬರು ಪುಟ್ಟ ಮಕ್ಕಳು ಆಟವಾಡುತ್ತಿದ್ದರು. ಆಗ ಅವರ ಕೈಗೆ ಸಿಕ್ಕಿದ 'ರ್ಯಾಟಾಲ್'ನ್ನು ಹಲ್ಲುಜ್ಜುವ ಪೇಸ್ಟ್ ಎಂದು ಭಾವಿಸಿದ ದೊಡ್ಡ ಮಗು ಧೃತಿ ಹಲ್ಲಿಗೆ ಉಜ್ಜಿಕೊಂಡಳು. ಬಳಿಕ 8 ತಿಂಗಳು ಚಿಕ್ಕ ಮಗುವಿನ ಹಲ್ಲಿಗೂ ಉಜ್ಜಿದಳೆನ್ನಲಾಗಿದೆ. ಇದು ಹೊಟ್ಟೆಯೊಳಗೆ ಹೋಗಿದ್ದು, ದೊಡ್ಡ ಮಗು (ಧೃತಿ) ತಂದೆ, ತಾಯಿಗೆ ಗೊತ್ತಾಯಿತು. ಎರಡೂ ಮಕ್ಕಳ ಬಾಯಲ್ಲಿ ರ್ಯಾಟಾಲ್ ಇರುವುದನ್ನು ಕಂಡು ಅವರಿಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದು ತೋರಿಸಿದಾಗ ಮಂಗಳೂರಿಗೆ ಕೊಂಡೊಯ್ಯುವಂತೆ ವೈದ್ಯರು ಸಲಹೆ ನೀಡಿದರು. ಆ ವೇಳೆಗೆ ಚಿಕ್ಕ ಮಗು ಕೂಡಾ ಅಸ್ವಸ್ಥಗೊಂಡಿತು. ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಧೃತಿ ಮೃತಪಟ್ಟಳು. ಮಗುವನ್ನು ಮನೆಗೆ ತಂದು ದಫನ ಮಾಡಿ, ಗಂಭೀರ ಸ್ಥಿತಿಯಲ್ಲಿರುವ ಚಿಕ್ಕ ಮಗುವನ್ನು ನೋಡಿಕೊಳ್ಳಲು ದಂಪತಿ ಮಂಗಳೂರಿನ ಆಸ್ಪತ್ರೆಗೆ ಧಾವಿಸಿದರು. ಈಗ ಆ ಮಗು ಚೇತರಿಸಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.