27ರಿಂದ ಉಜಿರೆ ಅಷ್ಟಬಂಧ ಬ್ರಹಕಲಶ
ಬೆಳ್ತಂಗಡಿ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವರಿಗೆ ಎರಡನೇ ಬಾರಿಯ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ 27 ರಿಂದ ಮಾ. 4 ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಪ್ರತಾಪಸಿಂಹ ನಾಯಕ್ ಹೇಳಿದರು.
ಅವರು ಮಂಗಳವಾರ ಉಜಿರೆ ದೇವಳದ ವಠಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಉತ್ಸವಾದಿಗಳ ವಿವರ ನೀಡಿದರು.
ತಾಲೂಕಿನ ಅತಿ ದೊಡ್ಡ ಗ್ರಾಮ ಉಜಿರೆ. ಧರ್ಮಸ್ಥಳದ ಹೆಬ್ಬಾಗಿಲು ಕೂಡ ಹೌದು. ಇಲ್ಲಿನ ಜನಾರ್ದನ ಸ್ವಾಮಿಗೆ 2001 ರಲ್ಲಿ ಬ್ರಹ್ಮಕಲಶಾಭಿಷೇಕ ನಡೆದಿತ್ತು. ಇದೀಗ 12 ವರ್ಷಗಳ ಬಳಿಕ ಊರ ಜನತೆ ಬ್ರಹ್ಮಕಲಶದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಗೌರವಾಧ್ಯಕ್ಷತೆಯಲ್ಲಿ ವೇದಮೂರ್ತಿ ನೀಲೇಶ್ವರ ಅಂಬಲಪಾಡಿ ವಾಸುದೇವ ತಂತ್ರಿಗಳ ಹಿರಿತನ ಹಾಗೂ ವೇದಮೂರ್ತಿ ಆಲಂಪಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೈದಿಕ, ಧಾರ್ಮಿಕ ವಿಧಿಗಳೊಂದಿಗೆ ನಡೆಯಲಿವೆ. ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ ಎಂದರು.
27 ರಂದು ಬೆಳಗ್ಗೆ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ಶ್ರೀಗಳಿಂದ ಸುಪ್ರಸಾದ ಭೋಜನ ಶಾಲೆ,ಧರ್ಮಸ್ಥಳ ಡಿ. ಹಷೇಂದ್ರ ಕುಮಾರ್ ಅವರಿಂದ ಹಸಿರುವಾಣಿ ಉಗ್ರಾಣ ಹಾಗೂ ಉದ್ಯಮಿ ಕೆ. ಹರೀಶ್ ಕುಮಾರ್ ಅವರಿಂದ ಬ್ರಹ್ಮಕಲಶೋತ್ಸವ ಕಾರ್ಯಾಲಯ ಉದ್ಘಾಟನೆ ನೆರವೇರಲಿದೆ. ಅಂದು ಸಂಜೆ ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಆಶೀರ್ವಚನ ನೀಡಲಿದ್ದಾರೆ ಎಂದರು.
ಮಾ. 3 ರಂದು ಸಂಜೆ ಶ್ರೀ ಸುದರ್ಶನ ಕಲಾ ವೇದಿಕೆಯಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು ಹಾಗೂ ಒಡಿಯೂರ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವದಿಸಲಿದ್ದಾರೆ ಎಂದು ನಾಯಕ್ ವಿವರಿಸಿದರು.
ದೇವಳದ ಒಳಾಂಗಣಕ್ಕೆ ಗ್ರಾನೈಟ್ ಹಾಸುಗಲ್ಲು ಹಾಕಲಾಗಿದ್ದು ಮತ್ತು ಪೌಳಿಯ ಛಾವಣಿ ನವೀಕರಿಸಲಾಗಿದೆ. ಸೇವಾ ರೂಪದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಊರ ಭಕ್ತಬಂಧುಗಳು ಕಳೆದ ಎರಡು ತಿಂಗಳಿನಿಂದ ಕರಸೇವೆ ಮಾಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ದೇಗುಲ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ಪಾಂಡುರಂಗ ಬಾಳಿಗ, ಪ್ರಧಾನ ಕಾರ್ಯದರ್ಶಿ ಮೋಹನ ಶೆಟ್ಟಿಗಾರ್, ಕಾರ್ಯದರ್ಶಿ ಪರಾರಿ ವೆಂಕಟರಮಣ ಹೆಬ್ಬಾರ್, ಕೋಶಾಧಿಕಾರಿ ಶರತ್‌ಕೃಷ್ಣ ಪಡ್ನೆಟ್ನಾಯ, ಉಪಾಧ್ಯಕ್ಷರಾದ ಎಂ.ಜಿ. ಶೆಟ್ಟಿ,ಅರುಣ್ ಕುಮಾರ್ ಇದ್ದರು.