ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪರಿಸ್ಥಿತಿ ಕೈಮೀರಿದರೆ ವಿದ್ಯುತ್ ಕಡಿತ ಅನಿವಾರ್ಯ

Lingaraj Badiger
Updated On : 13 Feb 2013, 11:29 am

ಮಂಗಳೂರು: ಪ್ರಸಕ್ತ ಪ್ರತಿನಿತ್ಯ 18 ಗಂಟೆ ಕಾಲ ತ್ರಿಫೇಸ್ ವಿದ್ಯುತ್ ಹಾಗೂ ನೀರಾವರಿ ಪಂಪ್‌ಸೆಟ್‌ಗಳಿಗೆ ದಿನದ 6 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ.  ಪಂಪ್‌ಸೆಟ್‌ದಾರರು ಸಂಜೆ 6ರಿಂದ ರಾತ್ರಿ 10ರ ವರೆಗೆ ವಿದ್ಯುತ್ ಬಳಸದೇ ಇದ್ದಲ್ಲಿ ವಿದ್ಯುತ್ ಕಡಿತ ಪ್ರಮಾಣ ತಗ್ಗಿಸಲು ಸಾಧ್ಯವಿದೆ. ಈ ವೇಳೆ ಉಳಿಕೆಯಾಗುವ ವಿದ್ಯುತ್‌ನ್ನು ಇತರೆ ಸಮಯದಲ್ಲಿ  ಹೆಚ್ಚುವರಿಯಾಗಿ ಪೂರೈಕೆ ಮಾಡಬಹುದು. ಪರಿಸ್ಥಿತಿ ಕೈಮೀರಿದರೆ ವಿದ್ಯುತ್ ಕಡಿತ ಅನಿವಾರ್ಯವಾಗಲಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಸ್. ಸುಮಂತ್ ಹೇಳಿದ್ದಾರೆ.
 ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ರೈತರಿಗೆ ನೀರಾವರಿ ಪಂಪ್‌ಸೆಟ್‌ಗೆ ವಿದ್ಯುತ್ ಅಗತ್ಯ ಎಂಬ ಅರಿವು ಇದೆ. ಪ್ರಸ್ತುತ ಮೆಸ್ಕಾಂ ಪೂರೈಸುತ್ತಿರುವ 723 ಮೆಗಾವ್ಯಾಟ್ ವಿದ್ಯುತ್‌ನಲ್ಲಿ ಶೇ.35ರಷ್ಟು ಪ್ರಮಾಣದ ವಿದ್ಯುತ್ ನೀರಾವರಿ ಪಂಪ್‌ಸೆಟ್‌ಗಳಿಗೆ ಪೂರೈಕೆಯಾಗುತ್ತಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ 2.5 ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿವೆ. ಮುಂದಿನ 10 ತಿಂಗಳಲ್ಲಿ ಅನಧಿಕೃತ ಪಂಪ್‌ಸೆಟ್‌ಗಳನ್ನು ಅಧಿಕೃತಗೊಳಿಸುವ ಕಾರ್ಯ ಮಾಡುತ್ತಿದ್ದು, ಈವರೆಗೆ 21,693 ಅನಧಿಕೃತ ಪಂಪ್‌ಸೆಟ್‌ಗಳನ್ನು ಕಾನೂನುಬದ್ಧ ನೋಂದಣಿ ಮಾಡಲಾಗಿದೆ ಎಂದರು. ಇಲ್ಲಿ ವಿದ್ಯುತ್ ಕಳವು ಪ್ರಕರಣ ಕಡಿಮೆ. ತಂತಿಗೆ ಹುಕ್ ಮಾಡಿ ಮೀಟರ್‌ನಿಂದ ನೇರ ವಿದ್ಯುತ್ ಕಳವಿಗೆ ಸಂಬಂಧಿಸಿ 300 ಪ್ರಕರಣಗಳನ್ನು ಕಳೆದ ಏಳೆಂಟು ತಿಂಗಳಲ್ಲಿ ದಾಖಲಿಸಲಾಗಿದೆ. ಕರಾವಳಿಯಲ್ಲಿ ರಾತ್ರಿ ಹೊತ್ತು ನೀರಾವರಿಗೆ ವಿದ್ಯುತ್ ಬಳಕೆ ಮಾಡುತ್ತಿರುವುದು ಕಡಿಮೆ ಎಂದರು.  ಜಿಲ್ಲೆಯಲ್ಲಿ 7 ಸಬ್‌ಸ್ಟೇಷನ್‌ಗಳು ವಿದ್ಯುತ್ ಪೂರೈಕೆ ಮಾಡುತ್ತಿವೆ. ಕೆಪಿಟಿಸಿಎಲ್‌ನ 110 ಕೆವಿ ಸಾಮರ್ಥ್ಯದ 2 ಸಬ್‌ಸ್ಟೇಷನ್‌ಗಳು ಜೆಪ್ಪು ಮತ್ತು ಬಿಜೈನಲ್ಲಿ ಸ್ಥಾಪನೆಯಾಗಲಿದ್ದು, ನಾಲ್ಕು ತಿಂಗಳೊಳಗೆ ಕಾರ್ಯನಿರ್ವಹಿಸಲಿವೆ. ಮುಂದಿನ ಐದಾರು ವರ್ಷಗಳ ಕಾಲ ವಿದ್ಯುತ್ ಕಡಿತ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
 ಗಂಗಾಕಲ್ಯಾಣ ಯೋಜನೆಯ ನೀರು ಸರಬರಾಜಿನ 900 ಸಂಪರ್ಕಗಳಿಗೆ 2012 ಡಿಸೆಂಬರ್ ಅಂತ್ಯಕ್ಕೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಸಂಸ್ಥೆಯ ಕಚೇರಿ ಸ್ಟೋರ್ ರೂಮ್‌ಗಳಿಗೆ ಕ್ಯಾಮರಾ ಅಳವಡಿಸಿ ಪಾರದರ್ಶಕತೆ ಮೂಲಕ ಮೇಲ್ವಿಚಾರಣೆ ನಡೆಸಲಾಗುತ್ತಿದೆ. 48 ಎಟಿಪಿ(ಎನಿ ಟೈಮ್ ಮನಿ)ಮೆಷಿನ್ ಮೂಲಕ ನಗದು ಸ್ವೀಕರಿಸುವ ವ್ಯವಸ್ಥೆ ಇದ್ದು, ಮಂಗಳೂರಿನ 19 ಕಡೆ ಸ್ವೀಕರಿಸಲಾಗುತ್ತಿದೆ ಎಂದರು. ಮೆಸ್ಕಾಂ ಹಣಕಾಸು ಸಲಹೆಗಾರ ಜಯರಾಂ, ಮುಖ್ಯ ಅಭಿಯಂತರ ಮಹದೇವ್, ಅಧಿಕಾರಿಗಳಾದ ಮಂಜಪ್ಪ, ಜಗದೀಶ್, ಯಶವಂತ ಕಾಮತ್, ಮುರಳೀಧರ ನಾಯಕ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಹರೀಶ್ ರೈ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ ಹಾಜರಿದ್ದರು.

ಕೆಪಿಟಿಸಿಎಲ್‌ನ 110 ಕೆವಿ ಸಾಮರ್ಥ್ಯದ 2 ಸಬ್‌ಸ್ಟೇಷನ್‌ಗಳು ಜೆಪ್ಪು ಮತ್ತು ಬಿಜೈನಲ್ಲಿ ಸ್ಥಾಪನೆಯಾಗಲಿದ್ದು, ನಾಲ್ಕು ತಿಂಗಳೊಳಗೆ ಕಾರ್ಯನಿರ್ವಹಿಸಲಿವೆ. ಮುಂದಿನ ಐದಾರು ವರ್ಷಗಳ ಕಾಲ ವಿದ್ಯುತ್ ಕಡಿತ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು.
- ಎಸ್. ಸುಮಂತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement