ಪೂಜೆಗೆ ಅವಕಾಶ ನಿರಾಕರಿಸಿ ಬಂಧನ: ಬಿಜೆಪಿ ವಿರುದ್ಧ ಸನಾತನಿಗಳ ಪ್ರತಿಭಟನೆ
ಮಂಗಳೂರು: ಮಧ್ಯಪ್ರದೇಶ ಸರಸ್ವತಿ ದೇವಸ್ಥಾನ ಮುಕ್ತಿ ಯಜ್ಞ ಸಮಿತಿ ರಾಷ್ಟ್ರೀಯ ಸಂಯೋಜಕ ನವಲಕಿಶೋರ ಶರ್ಮ ಮೇಲೆ ಪೊಲೀಸ್ ದಾಳಿ ಖಂಡಿಸಿ ಹಿಂದು ಜನಜಾಗೃತಿ ಸಮಿತಿ, ಸನಾತನ ಸಂಸ್ಥೆ ಕಾರ್ಯಕರ್ತರು ಮಂಗಳೂರು ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸುಕನ್ಯಾ ಆಚಾರ್ಯ ಮಾತನಾಡಿ, ಫೆ.15ರಂದು ವಸಂತ ಪಂಚಮಿ ದಿನ ಹಿಂದೂಗಳಿಗೆ ಪ್ರಾಚೀನ ಸರಸ್ವತಿ ಪೂಜೆ ಮಾಡಲು ನಿರಾಕರಿಸಿದ ಮಧ್ಯಪ್ರದೇಶದ ಬಿಜೆಪಿ ಸರ್ಕಾರ, ಮುಸ್ಲಿಮರಿಗೆ ನಮಾಜು ಮಾಡಲು ಅವಕಾಶ ನೀಡಿದೆ. ಪೂಜೆಗೆ ಅವಕಾಶ ಸಿಗಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಸಂಘಟಕ ನವಲ ಕಿಶೋರ ಶರ್ಮರನ್ನು ಬಂಧಿಸಿ, ಅಮಾನುಷವಾಗಿ ಥಳಿಸಿದ್ದು ಖಂಡನೀಯ ಎಂದರು.
ಹಿಂದು ಜನಜಾಗೃತಿ ಸಮಿತಿಯ ರಮಾನಂದ ಗೌಡ ಮಾತನಾಡಿ, ಪ್ರತಿ ವರ್ಷ ವಸಂತ ಪಂಚಮಿಯಂದು ಹಿಂದುಗಳಿಗೆ ಪೂಜೆಗೆ ಅವಕಾಶ ನೀಡಲಾಗುತ್ತದೆ. ಆದರೆ ಈ ಬಾರಿ ವಸಂತ ಪಂಚಮಿ ಶುಕ್ರವಾರ ಬಂದ ಕಾರಣ ಅವಕಾಶ ನಿರಾಕರಿಸಿ, ಬಿಜೆಪಿ ಸರ್ಕಾರ ಮುಸ್ಲಿಂ ಪರ ಎಂಬುದನ್ನು ತೋರಿಸಿಕೊಟ್ಟಿದೆ ಎಂದರು. ಪತ್ರಕರ್ತರ ಜತೆ ಸುದ್ದಿಗೋಷ್ಠಿಗೆ ಆಗಮಿಸುತ್ತಿದ್ದ ವೇಳೆ ಶರ್ಮರನ್ನು ಬಂಧಿಸುವ ಮೂಲಕ ಹಿಂದುತ್ವವಾದಿ ಪಕ್ಷ ಎಂದು ಹೇಳುವ ಬಿಜೆಪಿ ಕುಟಿಲ ನೀತಿಯನ್ನು ಹೊರಗೆಡಹಿದೆ ಎಂದರು.
--
ಮೂಲ್ಕಿ: ಬಾಲಕಿ ಅತ್ಯಾಚಾರ ಯತ್ನ
ಮೂಲ್ಕಿ: 10 ವರ್ಷದ ಬಾಲಕಿ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಇಲ್ಲಿನ ಕೆ.ಎಸ್. ರಾವ್ ನಗರದ ಲಿಂಗಪ್ಪಯ್ಯ ಕಾಡಿನಲ್ಲಿ ಮಂಗಳವಾರ ನಡೆದಿದೆ. ಕೆ.ಎಸ್. ರಾವ್ ನಗರದ ನಿವಾಸಿ ಮುಸ್ತಾಫ ಆರೋಪಿ. ಈತನ ಮನೆ ಸಮೀಪದ ಬಾಲಕಿಯೋರ್ವಳು ಶಾಲೆ ಬಿಟ್ಟು ಮನೆಗೆ ಹಿಂತಿರುಗುತ್ತಿದ್ದ ವೇಳೆ ಆರೋಪಿ ಮುಸ್ತಾಫ, ಬಾಲಕಿಗೆ ಸಮೀಪದ ಅಂಗಡಿಯಿಂದ ಮೊಟ್ಟೆ ತಂದುಕೊಡುವಂತೆ ತಿಳಿಸಿದ್ದ. ಅದರಂತೆ ಬಾಲಕಿ ಅಂಗಡಿಯಿಂದ ಮೊಟ್ಟೆ ತೆಗೆದುಕೊಂಡು ಆತನ ಮನೆಗೆ ಕೊಡಲು ಹೋದಾಗ ಮುಸ್ತಾಫ ಆಕೆಯನ್ನು ಎಳೆದೊಯ್ದು ಜ್ಯೂಸ್ ಕುಡಿಯುವಂತೆ ಒತ್ತಾಯಿಸಿ ಅತ್ಯಾಚಾರಕ್ಕೆ ಯತ್ನಿಸಿದ ಎನ್ನಲಾಗಿದೆ. ಈ ವೇಳೆ ಬಾಲಕಿ ಭಯದಿಂದ ಕಿರುಚಿದ್ದು, ಸ್ಥಳೀಯರು ಬಂದು ಆಕೆಯನ್ನು ರಕ್ಷಿಸಿದ್ದಾರೆ. ಆರೋಪಿ ಮುಸ್ತಾಫ ಅವಿವಾಹಿತನಾಗಿದ್ದು, ಈ ಹಿಂದೆಯೂ ಹಲವಾರು ಬಾರಿ ಇಂಥದ್ದೇ ವರ್ತನೆ ತೋರಿದ್ದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ಬಗ್ಗೆ ಬಗ್ಗೆ ಮೂಲ್ಕಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
--
ಅಪಹರಿಸಿ ಹಲ್ಲೆ : ಕ್ಲೀನರ್ ಸಾವು
ಮಂಗಳೂರು: ಅನುಮತಿ ಪಡೆಯದೆ ಮುರ್ಡೇಶ್ವರಕ್ಕೆ ಲಾರಿ ಒಯ್ದ ಕಾರಣಕ್ಕೆ ಮಾಲೀಕರಿಂದ ಅಮಾನುಷವಾಗಿ ಹಲ್ಲೆಗೀಡಾಗಿದ್ದ ಕ್ಲೀನರ್ ಶ್ರೀಕಾಂತ್ ಮೃತಪಟ್ಟಿದ್ದು, ಬಜಪೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮಾಲೀಕ ಲಕ್ಷೀಶ, ಪ್ರಕಾಶ್ ಶೆಟ್ಟಿಯ ತಂಡ ಚಾಲಕ ಶಿವಾಜಿ ಮತ್ತು ಶ್ರೀಕಾಂತ್ಗೆ ಗಂಭೀರ ಹಲ್ಲೆ ನಡೆಸಿತ್ತು. ಶ್ರೀಕಾಂತ್ ಸತ್ತ ಎಂದು ತಿಳಿದು ಮರವೂರು ಬಳಿ ಎಸೆದು ಹೋಗಿದ್ದರು. ಬಳಿಕ ಖದೀಮರು ಚಾಲಕನ್ನು 407 ಟೆಂಪೊದೊಳಗೆ 2 ದಿನ ಕೂಡಿ ಹಾಕಿದ್ದರು. ಮರವೂರು ಫ್ಯಾಕ್ಟರಿ ಬಳಿ ಟೆಂಪೊದೊಳಗೆ ಮುಲುಕಾಡುವ ಸದ್ದು ಕೇಳಿ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಬೆಳಕಿಗೆ ಬಂದಿತ್ತು. ಆರು ಮಂದಿ ಆರೋಪಿಗಳನ್ನು ಬಂಧಿಸಿರುವುದಾಗಿ ಬಜಪೆ ಪೊಲೀಸರು ತಿಳಿಸಿದ್ದಾರೆ.
ಕೊಕ್ಕಡದ ಯುವತಿ ನಾಪತ್ತೆ; ದೂರು
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೊಕ್ಕಡ ಗ್ರಾಮದ ಮುಂಡೂರುಪಲ್ಕೆ ಮನೆ ನಿವಾಸಿ, ಬಾಬು ಎಂಬವರ ಮಗಳು ಚೇತನಾ(18) ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಸಂಬಂಧಿಕರ ಮನೆಗೆಂದು ಹೋದಾಕೆ ಕಳೆದ ಆರು ದಿನಗಳಿಂದ ನಾಪತ್ತೆಯಾಗಿರುತ್ತಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಕಸ್ಮಿಕ ಬೆಂಕಿ; ಬಚ್ಚಲು ಮನೆ ಭಸ್ಮ
ವಿಟ್ಲ: ಆಕಸ್ಮಿಕವಾಗಿ ಬಚ್ಚಲು ಮನೆಗೆ ಬೆಂಕಿ ತಗುಲಿದ ಪರಿಣಾಮ ಸಾವಿರಾರು ರುಪಾಯಿ ನಷ್ಟ ಸಂಭವಿಸಿದ ಘಟನೆ ಕನ್ಯಾನ ಗ್ರಾಮದ ಕಾನ- ದೇಲಂತಬೆಟ್ಟು ಎಂಬಲ್ಲಿ ಸೋಮವಾರ ನಡೆದಿದೆ.
ಕಾನ- ದೇಲಂತಬೆಟ್ಟು ನಿವಾಸಿ ಫೆಲಿಕ್ಸ್ ಡಿಸೋಜ ಮನೆಯ ಕೊಟ್ಟಿಗೆಗೆ ಸೋಮವಾರ ಸಂಜೆ ಹೊತ್ತಿಗೆ ಬೆಂಕಿ ತಗುಲಿದ್ದು, ಬಚ್ಚಲು ಕೋಣೆಯ ಒಳಗೆ ಡೀಸೆಲ್ ಪಂಪ್ ಇದ್ದುದರಿಂದ ಬೆಂಕಿ ವ್ಯಾಪಿಸಿ ಶೌಚಾಲಯ ಹಾಗೂ ಕೊಟ್ಟಿಗೆಗೆ ಕೂಡಾ ಬೆಂಕಿ ತಗುಲಿ ಸಂಪೂರ್ಣ ನಾಶವಾಗಿದೆ.
ಇದರಿಂದ ಅವರಿಗೆ ಸುಮಾರು ಅಂದಾಜು 75 ಸಾವಿರ ನಷ್ಟ ಸಂಭವಿಸಿದೆ.