ವಿಶೇಷ ತಹಸೀಲ್ದಾರ್ ನೇಮಕಕ್ಕೆ 10 ದಿನ ಗಡುವು: ಪುನರೂರು
ಮೂಲ್ಕಿ: ಕಳೆದ 5 ದಶಕಗಳಿಂದ ಮೂಲ್ಕಿ ತಾಲೂಕು ರಚನೆ ಬಗ್ಗೆ ಹೋರಾಟ ನಡೆಯುತ್ತಿದ್ದು, ಮೂಡುಬಿದಿರೆ ತಾಲೂಕು ಘೋಷಣೆ ಮಾಡಿ ಮೂಲ್ಕಿಯ ಜನತೆಗೆ ದ್ರೋಹ ಬಗೆಯಲಾಗಿದೆ. 10 ದಿನದ ಒಳಗೆ ವಿಶೇಷ ತಹಸೀಲ್ದಾರ್ ನೇಮಕ ಮಾಡದಿದ್ದಲ್ಲಿ ಮೂಲ್ಕಿ ಹೋಬಳಿಯಲ್ಲಿ ಮತದಾನ ಬಹಿಷ್ಕಾರ ಸೇರಿದಂತೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಮೂಲ್ಕಿ ತಾಲೂಕು ಮತ್ತು ನ್ಯಾಯಾಲಯ ಹೋರಾಟ ಸಮಿತಿ ಅಧ್ಯಕ್ಷ ಹರಿಕೃಷ್ಣ ಪುನರೂರು ಎಚ್ಚರಿಸಿದ್ದಾರೆ.
ಮೂಲ್ಕಿ ತಾಲೂಕು ಮತ್ತು ನ್ಯಾಯಾಲಯ ಹೋರಾಟ ಸಮಿತಿ ವತಿಯಿಂದ ಮೂಲ್ಕಿ ತಾಲೂಕು ರಚನೆ ಬಗ್ಗೆ ಮೂಲ್ಕಿ ಬಸ್ ನಿಲ್ದಾಣದ ಬಳಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದ ಎರಡನೇ ದಿನದಂದು ಅಲಹಾಬಾದ್ಗೆ ತೆರಳಿದ್ದ ಸಮಿತಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
5 ನಿಮಿಷ ರಾ.ಹೆ.ಬಂದ್: ಬಳಿಕ 5 ನಿಮಿಷಗಳ ಕಾಲ ಸಮಿತಿಯ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿ ಕುಳಿತು ರಾಷ್ಟ್ರೀಯ ಹೆದ್ದಾರಿ ಬಂದ್ ನಡೆಸಿದರು. ಮಂಗಳವಾರ ಸದಸ್ಯರು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ಸತ್ಯಾಗ್ರಹ ನಡೆಸಿದರು.
ಸಮಿತಿ ದಿನೇಶ್ ಹೆಗ್ಡೆ, ಉಳೆಪಾಡಿ, ಸರ್ವೋತ್ತಮ ಅಂಚನ್, ಕೆ. ಭುವನಾಭಿರಾಮ ಉಡುಪ, ಹರೀಶ್ ಪುತ್ರನ್, ಮೂಲ್ಕಿ ನಗರ ಪಂಚಾಯಿತಿ ಉಪಾಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶಾಲೆಟ್ ಪಿಂಟೋ, ಮೂಲ್ಕಿ ಹೋಬಳಿಯ ಕೆಮ್ರಾಲ್, ಹಳೆಯಂಗಡಿ, ಪಡಪಣಂಬೂರು, ಮೆನ್ನಬೆಟ್ಟು, ಕಿನ್ನಿಗೋಳಿ, ಐಕಳ, ಬಳ್ಕುಂಜೆ, ಕಿಲ್ಪಾಡಿ ಪಂಚಾಯಿತಿನ ಸದಸ್ಯರು, ಮೂಲ್ಕಿ ವಿಜಯ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಶಾಲಾ, ಕಾಲೇಜುಗಳು ವಿದ್ಯಾರ್ಥಿಗಳು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದರು.
3ನೇ ದಿನಕ್ಕೆ ಧರಣಿ
ಮೂಲ್ಕಿ: ಮೂಲ್ಕಿ ತಾಲೂಕು ಮತ್ತು ನ್ಯಾಯಾಲಯ ಹೋರಾಟ ಸಮಿತಿ ನೇತೃತ್ವದಲ್ಲಿ ಮೂಲ್ಕಿ ತಾಲೂಕು ರಚನೆ ಕುರಿತು ನಡೆಯುತ್ತಿರುವ ಧರಣಿ ಸತ್ಯಾಗ್ರಹ ಮಂಗಳವಾರ 2ನೇ ದಿನಕ್ಕೆ ಕಾಲಿಟ್ಟಿದೆ. ವಿದ್ಯಾರ್ಥಿಗಳು, ಮೂಲ್ಕಿ ಹೋಬಳಿಯ 8 ಗ್ರಾಪಂ ಹಾಗೂ ಮೂಲ್ಕಿ ನ.ಪಂ. ಜನಪ್ರತಿನಿಧಿಗಳು ಭಾಗವಹಿಸಿದ್ದರು. ಹರಿಕೃಷ್ಣ ಪುನರೂರು ನೇತೃತ್ವದಲ್ಲಿ ಮ. 5 ನಿಮಿಷ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಯಿತು.
ಇಂದು ಅಂಗಡಿ ಮುಂಗಟ್ಟು ಬಂದ್: ಬುಧವಾರ ಬೆಳಗ್ಗೆಯಿಂದ ಧರಣಿ ಸತ್ಯಾಗ್ರಹ ನಡೆಯಲಿದ್ದು ಮ.3ರಿಂದ 4ರವರೆಗೆ ಮೂಲ್ಕಿ ಪರಿಸರದ ಅಂಗಡಿ, ಮುಂಗಟ್ಟುಗಳು, ಬ್ಯಾಂಕ್ಗಳು ಬಂದ್ ನಡೆಸಲಿದ್ದು, ಮೂಲ್ಕಿಯ ಬಪ್ಪನಾಡು ದೇವಳದಿಂದ ಕಾರ್ನಾಡು ಮೂಲಕ ಮೂಲ್ಕಿ ಬಸ್ ನಿಲ್ದಾಣದವರೆಗೆ ನಡೆಯಲಿರುವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 10 ದಿನಗಳ ಒಳಗೆ ವಿಶೇಷ ತಹಸೀಲ್ದಾರ್ ನೇಮಕ ಮಾಡದಿದ್ದಲ್ಲಿ ತೀವ್ರ ಪ್ರತಿಭಟನೆ ನಡೆಯಲಿದೆಯೆಂದು ಹರಿಕೃಷ್ಣ ಪುನರೂರು ತಿಳಿಸಿದ್ದಾರೆ.