ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶ್ರೀ ಪದ್ಧತಿ ವಿಸ್ತರಣೆಗೆ ನಬಾರ್ಡ್‌ನಿಂದ ರು. 25 ಕೋಟಿ: ಜಿನ್ಹ್ನಾ

Lingaraj Badiger
Updated On : 13 Feb 2013, 11:25 am

ಬೆಳ್ತಂಗಡಿ: ಶ್ರೀ ಪದ್ಧತಿ ಬತ್ತ ಬೇಸಾಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಎರಡನೇ ಹಂತದ ವಿಸ್ತರಣೆಗೆ ನಬಾರ್ಡ್ ಸಂಸ್ಥೆಯು ರು. 25 ಕೋಟಿ ನೆರವು ನೀಡಲು ಮುಂದಾಗಿದೆ ಎಂದು ನಬಾರ್ಡ್‌ನ ಕರ್ನಾಟಕ ವಲಯದ ಮುಖ್ಯ ಮಹಾಪ್ರಬಂಧಕ ಎಸ್.ಎನ್.ಎ. ಜಿನ್ನ್ಹಾ ಹೇಳಿದ್ದಾರೆ.
ಧರ್ಮಸ್ಥಳದಲ್ಲಿನ ಯೋಜನಾ ಕಚೇರಿ ಧರ್ಮಶ್ರೀಯಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ರಾಷ್ಟ್ರಕಟ್ಟುವ ಕೆಲಸ: ಕಳೆದ 30 ವರ್ಷಗಳಿಂದ ರಾಷ್ಟ್ರ ಕಟ್ಟುವ ಕೆಲಸ ನಬಾರ್ಡ್ ಸಂಸ್ಥೆ ಮಾಡುತ್ತಿದೆ. ಈ ಬಾರಿ ಪ್ರಾಕೃತಿಕ ಸಂಪತ್ತಿನ ಅಭಿವೃದ್ಧಿಯನ್ನು ಏಕೀಕೃತ ವ್ಯವಸ್ಥೆ ಮೂಲಕ ಮಾಡುವ ಉದ್ದೇಶ ಹೊಂದಿದೆ. ಇದು ಭಾರತ ಮತ್ತು ಜರ್ಮನಿಯ ಜಂಟಿ ಯೋಜನೆಯಾಗಿದೆ. ಈ ಯೋಜನೆ ಯಶಸ್ವಿಗೊಳಿಸುವುದಕ್ಕಾಗಿ ಸಹಕಾರಿ ಸಂಸ್ಥೆ, ಸ್ವಯಂ ಸೇವಾ ಸಂಸ್ಥೆ, ಟ್ರಸ್ಟ್‌ಗಳನ್ನು ಜೊತೆಗೂಡಿಸಿ ಅವುಗಳ ಮೂಲಕ ಅನುದಾನ ನೀಡುವ ಕಾರ್ಯ ಹಮ್ಮಿಕೊಂಡಿದೆ ಎಂದರು.
ಕರ್ನಾಟಕದಲ್ಲಿ ನಬಾರ್ಡ್ ಸಂಸ್ಥೆಯು ರು. 61.83 ಕೋಟಿ ವೆಚ್ಚದಲ್ಲಿ ಶ್ರೀಬತ್ತದ ಬೇಸಾಯ, ಪರಿಸರ ಪ್ರವಾಸ ಮತ್ತು ಜೈವಿಕ ವೈವಿಧ್ಯತ್ಯೆಯ ಉಳಿವು, ತೆಂಗಿನ ನಾರಿನ ಉತ್ಪನ್ನಗಳ ಅಭಿವೃದ್ಧಿ, ಔಷಧ ಸಸ್ಯಗಳ ಅಭಿವೃದ್ಧಿ, ಪಂಪ್‌ಸೆಟ್ ಮೂಲಕ ನೀರಾವರಿ ಸೌಲಭ್ಯ, ಹೈನುಗಾರಿಕೆ ಅಭಿವೃದ್ಧಿ, ಸಾವಯವ ಕೃಷಿ, ಕೈಮಗ್ಗ ಮತ್ತು ಕರಕುಶಲ ಕೈಗಾರಿಕೆ ಹಾಗೂ ಕುಡಿಯುವ ಶುದ್ಧ ನೀರಿನ ಪೂರೈಕೆಯಂತಹ 12 ಯೋಜನೆ ಹಮ್ಮಿಕೊಂಡಿದೆ ಎಂದು ತಿಳಿಸಿದರು.
11 ಜಿಲ್ಲೆಗಳಲ್ಲಿ ಅನುಷ್ಠಾನ: ಶ್ರೀ ಬತ್ತದ ಬೇಸಾಯ ಪದ್ಧತಿಯನ್ನು ರಾಜ್ಯದ 11 ಜಿಲ್ಲೆಗಳಲ್ಲಿ ಧರ್ಮಸ್ಥಳ ಯೋಜನೆ ಅನುಷ್ಠಾನಗೊಳಿಸಿ ಯಶಸ್ವಿಗೊಳಿಸಿದ್ದು, ಎರಡೂವರೆ ವರ್ಷದಲ್ಲಿ 30,000 ರೈತರು ತಮ್ಮ ಉತ್ಪಾದನೆಯಲ್ಲಿ ಶೇ. 25ರಷ್ಟು ಕಡಿಮೆ ಖರ್ಚಿನಲ್ಲಿ ಶೇ. 30 ರಷ್ಟು ಏರಿಕೆ ಕಂಡಿದ್ದಾರೆ. ರೈತರಿಗೆ ಪ್ರತಿ ಎಕರೆಗೆ ರು. 10 ಸಾವಿರ ನೆರವು ನೀಡಲಾಗಿದೆ. ಶ್ರೀ ಪದ್ಧತಿ ಅನುಸರಿಸಿದ 6 ಸಾವಿರ ರೈತರ ವಿವರಗಳನ್ನು ದಾಖಲೀಕರಣಗೊಳಿಸಿ ಮತ್ತು ಅದನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಇಂದು ಬಿಡುಗಡೆ ಮಾಡಲಾಗಿದೆ ಎಂದರು.
2013 ರಿಂದ 3 ವರ್ಷಗಳ ಅವಧಿಯಲ್ಲಿ ಶ್ರೀ ಪದ್ಧತಿಯ ಎರಡನೇ ಹಂತದ ವಿಸ್ತರಣೆಗೆ ನಬಾರ್ಡ್ ಸಂಸ್ಥೆಯು ಎಸ್‌ಕೆಆರ್‌ಡಿಪಿಗೆ ರು. 25 ಕೋಟಿ ನೆರವು ನೀಡಲು ಮುಂದಾಗಿದೆ. ಇದರಲ್ಲಿ ರು. 2 ಕೋಟಿಯಷ್ಟು ತರಬೇತಿಗೆ ಮತ್ತು ರು. 23 ಕೋಟಿಯನ್ನು ಶ್ರೀಬೇಸಾಯಗಾರರಿಗೆ ಸಾಲ ರೂಪದಲ್ಲಿ ನೀಡಲಾಗುವುದು ಎಂದು ಹೇಳಿದರು.
ಡಾ. ವೆಂಕಟೇಶ್ ತಾಗತ್, ಎಚ್. ಭರತ್ ಕುಮಾರ್, ಪ್ರಸಾದ್ ರಾವ್, ಎಲ್.ಎಚ್. ಮಂಜುನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement