ಶ್ರೀನಿವಾಸ ಆಸ್ಪತ್ರೆಯಲ್ಲಿ ಹೆರಿಗೆ ಸೌಲಭ್ಯ ಉಚಿತ
ಮಂಗಳೂರು: ಶ್ರೀನಿವಾಸ ವಿದ್ಯಾಸಂಸ್ಥೆಗಳ ರಜತಮಹೋತ್ಸವ ಫೆ.14ರಿಂದ 16ರವರೆಗೆ ನಡೆಯಲಿದೆ. ಇದರ ಅಂಗವಾಗಿ ಸುರತ್ಕಲ್ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಮಾ.31ರವರೆಗೆ ಉಚಿತ ಹೆರಿಗೆ ಸೇರಿದಂತೆ ಅನೇಕ ಸೌಲಭ್ಯ ಉಚಿತವಾಗಿ ನೀಡಲಾಗುತ್ತದೆ ಎಂದು ಆಸ್ಪತ್ರೆ ಅಧಿಕಾರಿ ಎಲ್.ಎಲ್.ಜೋಶುವಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರೋಗಿಗಳಿಗೆ ಆಹಾರ ಪೂರೈಕೆಯೂ ಉಚಿತ. ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಉಚಿತ ನೀಡಲಾಗುವುದು. ವೈದ್ಯಕೀಯ ಸೇವೆ ದಿನದ 24 ಗಂಟೆಯೂ ಲಭ್ಯವಿದೆ. ಹೆಚ್ಚಿನ ವಿವರಗಳಿಗೆ 0824-2478586 ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಎಂ.ಆರ್.ವಾಸುದೇವ, ಸಂಯೋಜಕ ಶ್ರೀನಿವಾಸ ಮಯ್ಯ ಡಿ. ಇದ್ದರು.
ಅಡವು ಚಿನ್ನ ನೋಟಿಸ್ ನೀಡದೆ ಏಲಂ: ದೂರು
ಸುಳ್ಯ: ಸುಳ್ಯ ಫೆಡ್ ಬ್ಯಾಂಕ್‌ನಲ್ಲಿ ಅಡವು ಇರಿಸಿದ್ದ ಚಿನ್ನ ನೋಟಿಸ್ ನೀಡದೆ ಏಲಂ ಮಾಡಲಾಗಿದೆ ಎಂದು ಸುಳ್ಯ ಪೊಲೀಸರಿಗೆ ದೂರು ನೀಡಲಾಗಿದೆ. ಅಡ್ಯಡ್ಕದ ಷಣ್ಮುಗ ಸುಂದರಂ 72.5 ಗ್ರಾಂ ಚಿನ್ನ ಅಡವಿರಿಸಿ ರು. 1 ಲಕ್ಷ ಸಾಲ ಪಡೆದಿದ್ದರು. ಮೂರು ಕಂತುಗಳಲ್ಲಿ ರು. 24,693 ಪಾವತಿಸಿದ್ದರು. ನಂತರ ಅದನ್ನು ಬಿಡಿಸಿಕೊಂಡು ಬರಲು ಹೋದ ವೇಳೆ ಚಿನ್ನ ಏಲಂ ಮಾಡಲಾಗಿದ್ದು, ಈ ಬಗ್ಗೆ ಗ್ರಾಹಕರು ಆ ಬ್ಯಾಂಕ್ ಮ್ಯಾನೇಜರ್ ವಿರುದ್ಧ ದೂರು ನೀಡಿದರು. ಇತ್ತೀಚೆಗೆ ಪೂರ್ತಿ ಹಣ ಕಟ್ಟಿ ಚಿನ್ನ ಪಡೆಯಲು ಹೋದಾಗ, ಚಿನ್ನ ಏಲಂ ಮಾಡಿರುವುದಾಗಿ ಬ್ಯಾಂಕಿನವರು ತಿಳಿಸಿದರು. ಇದರ ವಿರುದ್ಧ ಸುಂದರಂ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ.