ನಕ್ಸಲ್ ಬಾಧಿತ ಪ್ರದೇಶದಲ್ಲಿ ಟರ್ಬೈನರ್ ಕಾರ್ಯಾರಂಭ
ಮಂಗಳೂರು: ಬೆಳ್ತಂಗಡಿಯ ಇಂದಬೆಟ್ಟು ಗ್ರಾಮದ ನಕ್ಸಲ್ ಬಾಧಿತ ಪ್ರದೇಶ ಕುದ್ಕೊಳಿಯಲ್ಲಿ ನೀರಿನ ಸಂಗ್ರಹ ಇಲ್ಲದೆ ಸ್ಥಗಿತಗೊಂಡಿದ್ದ ಕಿರು ಜಲವಿದ್ಯುತ್ ಉತ್ಪಾದನೆ ಪ್ರಾರಂಭಿಸಿದೆ.
ಫೆ.8ರಂದು 'ಕನ್ನಡಪ್ರಭ'ದಲ್ಲಿ ವಿಶೇಷ ವರದಿ ಪ್ರಕಟವಾದ ಹಿನ್ನಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು, ಮಣ್ಣಿನ ಕಟ್ಟ ನಿರ್ಮಿಸಲು ಸೂಚಿಸಿದ್ದರು.
ಈಗ ಕಟ್ಟ ನಿರ್ಮಾಣ ಆರಂಭಗೊಂಡಿದ್ದು, 2 ದಿನಗಳಲ್ಲಿ ಒಂದಷ್ಟು ನೀರು ಸಂಗ್ರವಾಗಿ ದಿನದಲ್ಲಿ ಒಂದು ಗಂಟೆಯಷ್ಟು ಟರ್ಬೈನರ್ ತಿರುಗಲು ಸಾಧ್ಯವಾಗಿದೆ. ಕಟ್ಟ ನಿರ್ಮಾಣ ಮುಂದುವರಿದಿದ್ದು, ಒಂದು ವಾರದಲ್ಲಿ ಸುಭದ್ರ ಕಟ್ಟ ರಚನೆಯಾಗಲಿದೆ.
ವಿಶೇಷ ಅನುದಾನಕ್ಕೆ ಪ್ರಸ್ತಾವನೆ: ಈ ಮಧ್ಯೆ ಜಿಲ್ಲಾ ಪಂಚಾಯ್ತಿ ಸೂಚನೆ ಮೇರೆಗೆ ಜಲಾನಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಲ್ಲೇ ಸಮೀಪದ ಎರ್ಮಠದಲ್ಲಿ ರು. 4.95 ಲಕ್ಷದಲ್ಲಿ ವೆಂಟೆಡ್ ಡ್ಯಾಂ ಮತ್ತು ಅಲ್ಯ ಎಂಬಲ್ಲಿ ರು. 2 ಲಕ್ಷದಲ್ಲಿ ಕಿಂಡಿ ಅಣೆಕಟ್ಟ ನಿರ್ಮಾಣಕ್ಕೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಅನುದಾನ ಕೋರಿ ಬುಧವಾರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.