ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಅನುದಾನ ನೀಡದೆ ಅನ್ಯಾಯ
ಬ್ರಹ್ಮಾವರ: ಇತ್ತೀಚಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಸಮಸ್ಯೆ ಬಗ್ಗೆ ಶೀಘ್ರ ಸಭೆ ಕರೆದು ಕ್ರಮ ಕೈಗೊಳ್ಳುವುದಾಗಿ ಹೇಳಿಕೆ ನೀಡಿಯೂ, ಇತ್ತೀಚೆಗೆ ಅವರು ಮಂಡಿಸಿದ ರಾಜ್ಯ ಕೃಷಿ ಬಜೆಟ್ನಲ್ಲಿ ಕಾರ್ಖಾನೆಗೆ ಯಾವುದೇ ರೀತಿಯ ಅನುದಾನ ನೀಡದೆ ಅನ್ಯಾಯವೆಸಗಿದ್ದಾರೆ ಎಂದು ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 2006 ಏ.16ರಂದು, ಕಾರ್ಮಿಕರ ಹಲವಾರು ತಿಂಗಳ ವೇತನವನ್ನು ಬಾಕಿ ಇರಿಸಿಕೊಂಡು ಕಾರ್ಖಾನೆಯ ಭ್ರಷ್ಟ ಆಡಳಿತ ಮಂಡಳಿಯ ಆದೇಶದ ಮೇರೆಗೆ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯು ಕಾನೂನು ಬಾಹಿರವಾಗಿ ಮುಚ್ಚಿತ್ತು. ಕಾರ್ಖಾನೆ ಮುಚ್ಚಿ 6 ವರ್ಷ ಕಳೆದರೂ ಅಲ್ಲಿ ದುಡಿಯುತ್ತಿದ್ದ 220 ಕಾರ್ಮಿಕರಿಗೆ ಮತ್ತು ಅವರನ್ನು ನಂಬಿದ ನೂರಾರು ಕುಟುಂಬಗಳು ಮತ್ತು ಸಾವಿರಾರು ರೈತರ ಕುಟುಂಬಗಳು ಬೀದಿ ಪಾಲಾಗಿದೆ ಎಂದು ಸಂಘ ತನ್ನ ಪತ್ರಿಕಾ ಹೇಳಿಕೆಯಲ್ಲಿ ವಿಷಾದಿಸಿದೆ.
ಈಗಾಗಲೇ 2010ರಲ್ಲಿ ಕಾರ್ಮಿಕರ ಬಾಕಿ ವೇತನ ಮತ್ತು ಇತರ ಸೌಲಭ್ಯಗಳನ್ನು ಸಮಾನ 6 ಕಂತುಗಳಲ್ಲಿ ನೀಡಲು ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದರೂ ಈವರೆಗೂ ರಾಜ್ಯ ಸರ್ಕಾರವಾಗಲಿ, ಕಾರ್ಖಾನೆ ಆಡಳಿತ ಮಂಡಳಿಯಾಗಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ಈಗಾಗಲೇ ಕಾರ್ಖಾನೆ ಮುಚ್ಚಿರುವುದರಿಂದ 25- 30 ಕಾರ್ಮಿಕರು ಆರ್ಥಿಕ ಸಮಸ್ಯೆಯಿಂದ ಮರಣ ಹೊಂದಿದ್ದು, ಇನ್ನು ಕೆಲವರು ದಿನೇ ದಿನೇ ಮಾನಸಿಕ ಖಿನ್ನರಾಗುತ್ತಿದ್ದಾರೆ. ಇಷ್ಟಾದರೂ ಸರ್ಕಾರ ಇನ್ನೂ ಅನ್ಯಾಯವನ್ನು ಸರಿಪಡಿಸದಿರುವುದು ವಿಷಾದನೀಯ ಎಂದು ಸಂಘದ ಅಧ್ಯಕ್ಷ ಎಸ್. ಭಾಸ್ಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಎಸ್. ಕುಮಾರ್ ಸಾಲಿಕೇರಿ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.