ಮಂಗಳೂರು: ಗೋಡೆ ಸುಂದರಿಕರಣಕ್ಕೆ ಚಾಲನೆ
ಮಂಗಳೂರು: ನಗರದ ಆವರಣ ಗೋಡೆಗಳನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಮತ್ತು ಕರ್ಣಾಟಕ ಬ್ಯಾಂಕ್ ಸಹಯೋಗದಲ್ಲಿ ಭಿತ್ತಿ ಚಿತ್ರ ರಚಿಸುವ ಅಭಿಯಾನ ಮಂಗಳವಾರ ಆರಂಭಗೊಂಡಿತು. ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಜಯರಾಮ ಭಟ್ ಕುಂಚ ಹಿಡಿದು ವಿಶ್ವವಿದ್ಯಾಲಯ ಕಾಲೇಜಿನ ಆವರಣಗೋಡೆಯಲ್ಲಿ ಚಿತ್ರಕ್ಕೆ ಬಣ್ಣ ಹಾಕುವ ಮೂಲಕ ಚಾಲನೆ ನೀಡಿದರು. ನಗರದ ಗೋಡೆಗಳಲ್ಲಿ ಬೇಕಾಬಿಟ್ಟಿ ಭಿತ್ತಿ ಪತ್ರಗಳನ್ನು ಅಂಟಿಸಿದರೆ ಗೊಡೆ ಸೌಂದರ್ಯದ ಜತೆಗೆ ನಗರದ ಸೌಂದರ್ಯ ಕೂಡಾ ಹಾಳಾಗುತ್ತಿದೆ. ನಗರದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಇದನ್ನು ತಪ್ಪಿಸಲು ಭಿತ್ತಿ ಚಿತ್ರ ರಚಿಸುವುದು ಉತ್ತಮ ಉಪಾಯ ಎಂದು ಜಯರಾಮ ಭಟ್ ಹೇಳಿದರು. ಮಹಾನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಮಾತನಾಡಿ, ನಗರ ಸುಂದರೀಕರಣ ಕಾರ್ಯಕ್ಕೆ ಜನರು ಸ್ಪಂದಿಸುತ್ತಿಲ್ಲ. ಪೋಸ್ಟರ್, ಬ್ಯಾನರ್ ಹಾಕಬೇಡಿ ಎಂದರೂ ಎಲ್ಲೆಡೆ ಹಾಕುತ್ತಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ನಗರದ ಪಿವಿಎಸ್ ಮಹಿಳಾ ಹಾಸ್ಟೆಲ್ ಆವರಣ, ವಿವಿ ಕಾಲೇಜು ಆವರಣ, ವೆನ್ಲಾಕ್ ಆಸ್ಪತ್ರೆ ಆವರಣಗೋಡೆಗಳಲ್ಲಿ ಪ್ರಾರಂಭಿಕ ಹಂತದಲ್ಲಿ ಚಿತ್ರ ರಚಿಸಲಾಗುವುದು. ಕಲಾವಿದ ದಿನೇಶ್ ಹೊಳ್ಳ ಮಾರ್ಗದರ್ಶನದಲ್ಲಿ ಹರೀಶ್ ಮರ್ಣೆ, ಹರೀಶ್ ಕೊಡಿಯಾಲ ಬೈಲ್ ಭಿತ್ತಿ ಚಿತ್ರ ರಚಿಸುವರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.