ಮೀನು ಸಂಸ್ಕರಣಾ ಘಟಕದಲ್ಲಿ ಅನಿಲ ಸೋರಿ ಕಾರ್ಮಿಕ ಸಾವು
ಮಂಗಳೂರು: ಹರೇಕಳ ಎಲ್ಯಾರ ಪದವಿನ ಮೀನು ಸಂಸ್ಕರಣಾ ಘಟಕದಲ್ಲಿ ಅನಿಲ ಸೋರಿಕೆಯಿಂದ ಮೂವರು ಕಾರ್ಮಿಕರು ಅಸ್ವಸ್ಥಗೊಂಡಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಮಂಜೇಶ್ವರದ ರಿಯಾಜ್ ಮೃತ ಕಾರ್ಮಿಕ. ಸಂಕೇತ್ ಮತ್ತು ಹನೀಫ್ ಅಸ್ವಸ್ಥಗೊಂಡವರು. ಎಲ್ಯಾರ ಪದವಿನ ಇಂಡೊ ಫಿಶ್‌ಮಿಲ್‌ನಲ್ಲಿ ಬುಧವಾರ ರಾತ್ರಿ 10 ಗಂಟೆ ವೇಳೆಗೆ ಈ ಅವಘಡ ಸಂಭವಿಸಿದೆ. ಈ ಘಟಕದಲ್ಲಿ ಕೊಳೆತ ಮೀನಿನಿಂದ ಗೊಬ್ಬರ ತಯಾರಿಸುತ್ತಾರೆ.
ಈ ಪ್ರಕ್ರಿಯೆ ವೇಳೆಗೆ ಅಮೋನಿಯಂ ನೈಟ್ರೇಟ್ ಉತ್ಪತ್ತಿಯಾಗುತ್ತದೆ. ಇದು ವಿಷಾನಿಲವಾಗಿದ್ದು, ಸ್ಫೋಟಗೊಳ್ಳವ ಲಕ್ಷಣಗಳಿರುತ್ತದೆ. ಈ ಕಾರ್ಖಾನೆಯಲ್ಲಿ ಅಮೋನಿಯಂ ನೈಟ್ರೇಟ್ ಶಮನಗೊಳಿಸುವಂಥ ಯಾವುದೇ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿಲ್ಲ ಎನ್ನಲಾಗಿದೆ.