ವಿಟ್ಲ: ಪ್ರತ್ಯೇಕ ಅಗ್ನಿ ದುರಂತ, ಲಕ್ಷಾಂತರ ನಷ್ಟ
ವಿಟ್ಲ: ಪ್ರತ್ಯೇಕ ಮೂರು ಕಡೆಗಳಲ್ಲಿ ಅಗ್ನಿ ಅವಘಡದಿಂದ ಲಕ್ಷಾಂತರ ರು. ನಷ್ಟ ಸಂಭವಿಸಿದ ಘಟನೆ ವಿಟ್ಲ ಆಸುಪಾಸಿನಲ್ಲಿ ಬುಧವಾರ ನಡೆದಿದೆ.
ಕುದ್ದುಪದವು ಮಹಮ್ಮದ್ ಎಂಬವರ ಜಾಗದ ಪಕ್ಕದಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ನಿಂದ ಮಧ್ಯಾಹ್ನ 1.30ರ ಸುಮಾರಿಗೆ ಹಬ್ಬಿದ ಬೆಂಕಿ ಸಂಪೂರ್ಣ ಹರಡಿ ಎರಡು ಗೇರು ಮರಗಳನ್ನು ಆಹುತಿ ತೆಗೆದುಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾರಿಗೂ ತಿಳಿಯದಿದ್ದರೆ ಪಕ್ಕದಲ್ಲಿದ್ದ ಮನೆಗಳಿಗೂ ಬೆಂಕಿ ಹರಡುವ ಸಂಭವವಿತ್ತು.
ವೀರಕಂಬ ಗ್ರಾಮದ ಬೊಣ್ಯಕುಕ್ಕು ಗೋಪಾಲಕೃಷ್ಣ ಭಟ್ ಅವರ ಜಾಗದಲ್ಲೂ ವಿದ್ಯುತ್ ತಂತಿಗಳ ಶಾರ್ಟ್ ಸರ್ಕ್ಯೂಟ್‌ನಿಂದ 3 ಎಕ್ರೆ ಗುಡ್ಡಕ್ಕೆ ಬೆಂಕಿ ತಗುಲಿದ್ದು, ಬಂಟ್ವಾಳ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಉಕ್ಕುಡ ಸಮೀಪದ ಕಾಂತಡ್ಕ ಸಮೀಪ ರಬ್ಬರ್, ಗೇರು ತೋಟಕ್ಕೆ ಬೆಂಕಿ ತಗುಲಿದೆ. ಕಾನ ಈಶ್ವರ ಭಟ್ ಅವರ 2.30 ಎಕ್ರೆ ಜಾಗದಲ್ಲಿದ್ದ ರಬ್ಬರ್ ತೋಟಕ್ಕೆ ಬೆಂಕಿ ತಗುಲಿ ಸುಮಾರು 1 ಎಕ್ರೆಯಲ್ಲಿದ್ದ ಎಂಟು ವರ್ಷದ 200 ಮರಗಳು ಹಾನಿಗೊಳಗಾಗಿವೆ. ಅಲ್ಲೇ ಪಕ್ಕದಲ್ಲಿದ್ದ ಅಣ್ಣು ನಾಯ್ಕ ಅವರ 1 ಎಕ್ರೆ ಗೇರು ತೋಟಕ್ಕೂ ಬೆಂಕಿ ತಗುಲಿ ಹದಿನೈದು ವರ್ಷದ ಸುಮಾರು 75 ಮರಗಳು ನಾಶವಾಗಿವೆ. ಅಲ್ಲೇ ಪಕ್ಕದಲ್ಲಿದ್ದ ಆರ್.ಕೆ. ಅಬ್ದುಲ್ಲ ಹಾಜಿ ಮತ್ತು ಗೋವಿಂದ ಪ್ರಕಾಶ್ ಎಂಬವರ ರಬ್ಬರ್ ತೋಟಕ್ಕೂ ಬೆಂಕಿ ತಗುಲಿದ್ದು, ಸುಮಾರು 10ರಿಂದ 15 ಮರಗಳು ನಾಶಗೊಂಡಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಲು ಹರಸಾಹಸ ಪಟ್ಟರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.