ಕಮಿಷನ್ ಆಸೆಗೆ ಉಳಿತಾಯ ಖಾತೆ ಸಂಖ್ಯೆ ಹೆಚ್ಚಳ!
ಪುತ್ತೂರು: ಅಂಚೆ ಇಲಾಖೆಯಲ್ಲಿ ಆರ್.ಡಿ. ಖಾತೆ ಪ್ರಚುರ ಪಡಿಸಲು ಭಾರತ ಸರ್ಕಾರದ ಹಣಕಾಸು ಇಲಾಖೆ ಪ್ರೇರಣಾದಾಯಿ ಯೋಜನೆಗಳನ್ನು ಅಳವಡಿಸಿಕೊಂಡಿದೆ. ಜನರಲ್ಲಿ ಉಳಿತಾಯದ ಮನೋಭಾವ ಹೆಚ್ಚಿಸುವ ದೃಷ್ಟಿಯಿಂದ ಹಾಗೂ ಹೆಚ್ಚಿನ ಆರ್ಥಿಕ ಸಂಪನ್ಮೂಲವನ್ನು ಸಾರ್ವಜನಿಕರಿಂದ ಕ್ರೋಢೀಕರಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆಗೆ ಆರ್‌ಡಿ ಖಾತೆಯೊಂದಕ್ಕೆ ರು. 163.22ನ್ನು ಕಮಿಷನ್ ರೂಪದಲ್ಲಿ ಭಾರತ ಸರ್ಕಾರದ ಹಣಕಾಸು ಇಲಾಖೆ ನೀಡುತ್ತಾ ಬಂದಿದೆ. ಆದರೆ ಕಮಿಷನ್ ಪಡೆಯಲು ಉಳಿತಾಯ ಖಾತೆ ಸಂಖ್ಯೆ ಅನಗತ್ಯವಾಗಿ ಹೆಚ್ಚಿಸಿದ ಪ್ರಕರಣ ಮಾಹಿತಿ ಹಕ್ಕಿನಲ್ಲಿ ಬಹಿರಂಗಗೊಂಡಿದೆ.
ಸಹಸ್ರಾರು ಖಾತೆಗಳು: ಆರ್.ಡಿ. ಖಾತೆಗಳ ಮೊಬಲಗು ಸಂಗ್ರಹಣೆಯಲ್ಲಿ ಮುತುವರ್ಜಿ ವಹಿಸುವ ಬದಲು ಅಂಚೆ ಇಲಾಖೆ, ಖಾತೆಗಳ ಸಂಖ್ಯೆ ಎತ್ತರಿಸುವಲ್ಲಿ ತನ್ನ ಉದ್ಯೋಗಿಗಳನ್ನು ತೊಡಗಿಸಿಕೊಂಡಿತು. ಪುತ್ತೂರು ಅಂಚೆ ವಿಭಾಗದಲ್ಲಿ ಜೂನ್‌ನಿಂದ ಡಿಸೆಂಬರ್ ತನಕ ತೆರೆಯಲಾದ ಆರ್‌ಡಿ ಖಾತೆಗಳ ಒಟ್ಟು ಸಂಖ್ಯೆ-76,908. ಇದರಿಂದ ಅಂಚೆ ಇಲಾಖೆ ಭಾರತ ಸರ್ಕಾರದ ಹಣಕಾಸು ಇಲಾಖೆಯಿಂದ ಪುತ್ತೂರು ವಿಭಾಗವೊಂದರಲ್ಲೇ ಕಬಳಿಸಿದ ಕಮಿಷನ್ ಮೊತ್ತ ರು. 1,25,52,923.76.
ಇದರಲ್ಲಿ ತಪ್ಪೇನು?: ಅಂಚೆ ಇಲಾಖೆ ರು. 200ರ ಖಾತೆ ಒಂದನ್ನು ತೆರೆಯುವ ಬದಲಾಗಿ ರು. 10ರ 20 ಖಾತೆಗಳನ್ನು ತೆರೆಯಿಸುವ ಜಾಣತನ ತೋರಿತು. ಖಾತೆಗಳ ಸಂಖ್ಯಾ ಗುರಿಯನ್ನೇ ಸಾಧನೆಯ ಮಾನದಂಡವಾಗಿ ರೂಢಿಸಿಕೊಂಡಿತು.
ಮಾಹಿತಿ ನೀಡಲು ನಿರಾಕರಣೆ: 10ರ ಆರ್.ಡಿ. ಖಾತೆಗೆ ಮುಂದಿನ ತಿಂಗಳುಗಳಲ್ಲಿ ನಿರಂತರವಾಗಿ ಎಷ್ಟು ತಿಂಗಳುಗಳ ಕಾಲ ಸಾರ್ವಜನಿಕರಿಂದ ಹಣ ಜಮೆ ಮಾಡಿಸುವಲ್ಲಿ ಅಂಚೆ ಇಲಾಖೆ ಮುತುವರ್ಜಿವಹಿಸಿದೆ ಎಂಬ ಬಗ್ಗೆ ಮಾಹಿತಿ ಹಕ್ಕು ಅರ್ಜಿಯಲ್ಲಿ ಪೂರ್ಣ ಮಾಹಿತಿ ನೀಡಲು ಅಂಚೆ ಇಲಾಖೆ ನಿರಾಕರಿಸಿದೆ. ಪುತ್ತೂರು ವ್ಯಾಪ್ತಿಯಲ್ಲಿ ರು. 10 ಮತ್ತು 20 ಮೊತ್ತದ ಎಷ್ಟು ಖಾತೆ ತೆರೆಯಲಾಗಿದೆ ಎಂಬ ಪ್ರಶ್ನೆಗೆ ಇವು 'ಕಲ್ ಔಟ್' ಇನ್‌ರ್ಫಾರ್ಮೇಶನ್ ಎಂಬ ನೆಪ ನೀಡಿರುವ ಇಲಾಖೆ ಮಾಹಿತಿ ಬಿಟ್ಟು ಕೊಡಲಿಲ್ಲ. ಸರ್ಕಾರದ ಒಂದು ಇಲಾಖೆಯ ಉತ್ತಮ ಯೋಜನೆಯೊಂದನ್ನು ಇನ್ನೊಂದು ಇಲಾಖೆ ಎಷ್ಟು ಕೆಟ್ಟ ರೀತಿಯಲ್ಲಿ ದುರುಪಯೋಗ ಮಾಡುತ್ತಿವೆ ಎಂಬುದನ್ನು ಮಾಹಿತಿ ಹಕ್ಕು ಅಧಿನಿಯಮ ಜಾರಿಗೊಂಡು ಬಯಲಾಗಿಸಿದೆ.
ಖಾತೆ ತೆರೆದ ತಕ್ಷಣ ಕಮಿಷನ್: ಯಾವುದೇ ಅಡೆತಡೆ ಪರಿಶೀಲನೆ, ಪರಿಗಣನೆ ಇಲ್ಲದೇ, ಕೇವಲ 10ರ ಆರ್.ಡಿ ಖಾತೆ ತೆರೆದ ತಕ್ಷಣ ಹಣಕಾಸು ಇಲಾಖೆ ರು. 163.22 ಕಮಿಷನ್ ಅಂಚೆ ಇಲಾಖೆಗೆ ನೀಡುತ್ತದೆ. ಇದರ ಜೊತೆಯಲ್ಲೇ ಅಂಚೆ ಇಲಾಖೆ ಒಂದು ಖಾತೆ ತೆರೆಯಲು ತನ್ನ ಇಲಾಖೆಯ ಪುಸ್ತಕ, ಸಿಬ್ಬಂದಿ ಸಮಯ, ಕಚೇರಿ ವೆಚ್ಚ ಎಂದು ಸುಮಾರು ರು. 50ರಷ್ಟು ಹಣ ಪೋಲು ಮಾಡುತ್ತದೆ.
ಸಾರ್ವಜನಿಕರೂ ರು. 10ರ ಖಾತೆ ಎಂದು ಬಿಟ್ಟು ಬಿಡುತ್ತಾರೆ. ಅಂತಹ ಖಾತೆ ಮುಂದುವರಿಯದೇ ಇರುವುದರಿಂದ ಇದು ಸಾರ್ವಜನಿಕ ನಷ್ಟ ಎಂದು ಸರ್ಕಾರಕ್ಕೆ ಮನವರಿಕೆ ಮಾಡಬೇಕಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.