ಬಜರಂಗದಳ, ಸೇನೆ ಎಚ್ಚರಿಕೆ ಬರೆ: ಪಾರ್ಕ್ಗಳಲ್ಲಿ ಪ್ರೇಮಿಗಳಿಗೆ ಬರ
ಮಂಗಳೂರು: ಪ್ರತಿದಿನ ಪ್ರಣಯ ಹಕ್ಕಿಗಳಿಂದ ಗಿಜಿಗುಡುತ್ತಿದ್ದ ಕದ್ರಿ ಪಾರ್ಕ್, ಪಿಲಿಕುಳ ನಿಸರ್ಗಧಾಮದಲ್ಲಿ ಪ್ರೇಮಿಗಳ ದಿನದಂದು ಭಣಗುಡುತ್ತಿತ್ತು !
ಬಜರಂಗದಳ, ಶ್ರೀರಾಮಸೇನೆ ಎಚ್ಚರಿಕೆ ಹಿನ್ನೆಲೆಯಲ್ಲಿ ಬಹುತೇಕ ಜೋಡಿಗಳು ಪ್ರೇಮಿಗಳ ದಿನದಂದು ಸಾರ್ವಜನಿಕ ಆಚರಣೆಗೆ ಮನಸ್ಸು ಮಾಡಿಲ್ಲ. ಜೋಡಿ ಹಕ್ಕಿಗಳು ಕಂಡು ಬಂದರೆ ಅವರನ್ನು ಪೊಲೀಸರಿಗೆ ಒಪ್ಪಿಸುವುದಾಗಿ ಬೆದರಿಕೆ ಒಡ್ಡಿದ್ದರಿಂದ ಇವರ ಉಸಾಬರಿಯೇ ಬೇಡ ಎಂದು ಪ್ರೇಮಿಗಳು ಶಾಲೆ, ಕಾಲೇಜು, ತಮ್ಮ, ತಮ್ಮ ಕಾರ್ಯ ಕ್ಷೇತ್ರಗಳಲ್ಲಿಯೇ ಪ್ರೇಮ ನಿವೇದನೆ, ಆಚರಣೆಯನ್ನು ಸೀಮಿತವಾಗಿಸಿದರು. ಕೆಲ ಜೋಡಿಗಳು ಸಿನಿಮಾ ಥಿಯೇಟರ್ಗಳಿಗೆ ತೆರಳಿ ಸಿನಿಮಾ ನೋಡಿದರು.
ಬಜರಂಗದಳ ಪ್ರತಿಭಟನೆ: ಪ್ರೇಮಿಗಳ ದಿನಾಚರಣೆ, ಪಬ್ ನೃತ್ಯ, ಡಿಜೆ ವಿರೋಧಿಸಿ ಬಜರಂಗದಳ ಕಾರ್ಯಕರ್ತರು ಗುರುವಾರ ಮಹಿಳಾ ಕಾಲೇಜು ಮುಂಭಾಗದಲ್ಲಿ ಗ್ರೀಟಿಂಗ್ ಕಾರ್ಡ್ಗಳಿಗೆ ಬೆಂಕಿ ಇಟ್ಟು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಬಜರಂಗದಳ ಮುಖಂಡ ಪುನೀತ್ ಕುಮಾರ್, ನಾವು ಪ್ರೇಮಿಗಳಿಗೆವಿರೋಧ ಇಲ್ಲ. ಪ್ರೇಮವನ್ನು ಬಹಿರಂಗವಾಗಿ ಆಚರಿಸುವ ಸಂಸ್ಕೃತಿ ವಿರುದ್ಧ ಪ್ರತಿಭಟನೆ. ಪ್ರೇಮಿಗಳ ದಿನಾಚರಣೆ ಹೆಸರಲ್ಲಿ ಪಬ್, ಡಿಜೆ, ಅಶ್ಲೀಲ ನೃತ್ಯಗಳು, ಮಾದಕ ದ್ರವ್ಯ ಸೇವನೆಗಳು, ಅನೈತಿಕ ಚಟುವಚಿಕೆಗಳು ನಡೆಯುತ್ತಿವೆ. ಈ ಮಾಫಿಯಾಗಳು ಯುವಜನತೆಯನ್ನು ದಾರಿ ತಪ್ಪಿಸುತ್ತಿವೆ. ಸಮಾಜ ವಿರೋಧಿ ಚಟುವಟಿಕೆಗಳಿಗೆ ನಮ್ಮ ವಿರೋಧವಿದೆ. ಯುವ ಸಮೂಹವನ್ನು ಜಾಗೃತಿಗೆ ತರುವುದು ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಯಲಿದೆ ಎಂದರು.
ಪ್ರಮೋದ್ ಪಂಪ್ವೆಲ್, ಉದಯ್ ಇತರರು ಇದ್ದರು.
ಪ್ರೇಮಿಗಳ ಮುನ್ನಾ ದಿನ ಹಲ್ಲೆ: ಬುಧವಾರ ಬಿಗ್ ಸಿನಿಮಾಸ್ನಲ್ಲಿ ಎಬಿಸಿಡಿ ಸಿನಿಮಾ ನೋಡುತ್ತಿದ್ದ ಯುವಕ, ಯುವತಿಯರ ಗುಂಪಿಗೆ ದುಷ್ಕರ್ಮಿಗಳ ಗುಂಪು ಥಳಿಸಿದೆ. ಮೂವರು ಹಿಂದು ಯುವತಿಯರು, 4 ಮಂದಿ ಮುಸ್ಲಿಂ ಯುವಕರ ಜತೆ ಟಾಕೀಸ್ ಒಳಗಡೆ ಮೈಮರೆತು ಸಿನಿಮಾ ವೀಕ್ಷಿಸುತ್ತಿರುವುದನ್ನು ಒಳಗಡೆಯೇ ಇದ್ದ ಸಂಘಟನೆ ಕಾರ್ಯಕರ್ತನೊಬ್ಬ ನೋಡಿದ್ದು, ಉಳಿದವರನ್ನು ಕರೆಸಿದ್ದಾನೆ. ಸಿನಿಮಾ ನೋಡಿ ಹೊರಬರುತ್ತಿರುವಾಗ ಹಲ್ಲೆ ನಡೆದಿದೆ. ದೂರು ದಾಖಲಿಸದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.