ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹೊಸ ಯೋಜನೆ ಘೋಷಿಸದ ಪಾಲಿಕೆ ಬಜೆಟ್

Parashurama
Updated On : 15 Feb 2013, 1:24 am

ಮಂಗಳೂರು: 'ಸ್ವಸ್ತ ಕುಟೀರ' ಹೊರತುಪಡಿಸಿ ಬೇರಾವುದೇ ಹೊಸ ಯೋಜನೆ ಇಲ್ಲ, ಕಳೆದ ವರ್ಷ ಘೋಷಿಸಿದ್ದ ಘನತ್ಯಾಜ್ಯ ವಿಲೇವಾರಿ ಬಗ್ಗೆ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮತ್ತೆ ಈ ವರ್ಷವೂ ಪುನರಾವರ್ತನೆ...
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹೊಸ್ತಿಲಲ್ಲಿದ್ದರೂ ಕಾಂಗ್ರೆಸ್-ಬಿಜೆಪಿ ಜಂಟಿ ಆಡಳಿತದಿಂದಾಗಿ ಹೊಸ ಯೋಜನೆಗಳಿಗೆ ಮಣೆ ಹಾಕದೆ ಇಬ್ಬರಿಗೂ ಯೋಜನೆಗಳ ಲಾಭ ಸಿಗದಂತೆ ಬಜೆಟ್ ಮಂಡಿಸುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಮಾಮೂಲು ಲೇಖಾನುದಾನ ಮಂಡನೆಯಷ್ಟೆ ಪಾಲಿಕೆ ಪಿತೃಗಳಿಗೆ ದೊರಕಿದ ತೃಪ್ತಿ. ಸ್ವಸ್ತಿ ಕುಟೀರ ಎಂದು ಘೋಷಿಸಿದ್ದರೂ ಅದು ಕುಟೀರ ಭಾಗ್ಯದ ಇನ್ನೊಂದು ರೂಪ ಅಷ್ಟೇ. ಅಷ್ಟಕ್ಕೂ ಪಾಲಿಕೆಯಲ್ಲಿ ಬಡತನ ರೇಖೆಗಿಂತ ಕೆಳಗಿನ ಇತರೆ(ಎಸ್‌ಸಿ ಎಸ್‌ಟಿ ಹೊರತುಪಡಿಸಿ)ವರ್ಗದವರಿಗೆ ಮನೆ ದುರಸ್ತಿಗೆ ಇದು ಅನುಕೂಲ. ಉಳಿದಂತೆ ಉಳಿತಾಯ ಬಜೆಟ್‌ನ್ನು ಮಂಡಿಸಿದೆ.
2013-14ನೇ ಸಾಲಿಗೆ ರು. 257.66 ಕೋಟಿ ಆದಾಯ ನಿರೀಕ್ಷಿಸಿದ್ದು, ರು. 257.60 ಕೋಟಿ ವೆಚ್ಚ ಅಂದಾಜಿಸಲಾಗಿದೆ. ರು. 6.04 ಲಕ್ಷ ಉಳಿತಾಯ ಕಾಣಿಸಲಾಗಿದೆ.
ಮೇಯರ್ ಗುಲ್ಜಾರ್ ಬಾನು ಅಧ್ಯಕ್ಷತೆಯಲ್ಲಿ ಗುರುವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ವಿಶೇಷ ಬಜೆಟ್ ಸಭೆಯಲ್ಲಿ ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷೆ ಶಾಂತಾ ಬಜೆಟ್ ಮಂಡಿಸಿದರು. ಉಪಮೇಯರ್ ಅಮಿತಕಲಾ, ಆಯುಕ್ತ ಡಾ.ಹರೀಶ್ ಕುಮಾರ್ ಹಾಜರಿದ್ದರು.

257.66 ಕೋಟಿ ಆದಾಯ ಸಂಗ್ರಹ
ನೀರಿನ ಶುಲ್ಕದಿಂದ ರು. 35 ಕೋಟಿ, ಸ್ವಯಂಘೋಷಿತ ಆಸ್ತಿ ತೆರಿಗೆಯಿಂದ ರು. 29 ಕೋಟಿ, ಉದ್ದಿಮೆ ಪರವಾನಗಿಯಿಂದ ರು. 1.30 ಕೋಟಿ, ಕಟ್ಟಡ ನಿಯಂತ್ರಣ ಶುಲ್ಕ, ಅಭಿವೃದ್ಧಿ ಶುಲ್ಕ ಸೇರಿ ರು. 7.26 ಕೋಟಿ, ಮಾರುಕಟ್ಟೆಗಳಿಂದ ರು. 3.69 ಕೋಟಿ, ಘನತ್ಯಾಜ್ಯ ಕರ ರು. 15 ಕೋಟಿ, ಸರ್ಕಾರದಿಂದ ಅನುದಾನ ಮತ್ತು ಇತರೆ ಮೂಲದಿಂದ ಆದಾಯ ನಿರೀಕ್ಷೆ ಒಟ್ಟು ರು. 257.66 ಕೋಟಿ.
257.60 ಕೋಟಿ ಖರ್ಚು
ಪಾಲಿಕೆಯ ಅಭಿವೃದ್ಧಿ ಕಾಮಗಾರಿಗೆ ರು. 17.95 ಕೋಟಿ, ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿಗೆ ರು. 14.25 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ ರು. 25 ಕೋಟಿ, ಭದ್ರತಾ ಸಿಬ್ಬಂದಿ ವೆಚ್ಚಕ್ಕೆ ರು. 2.50 ಕೋಟಿ, ಪಾಲಿಕೆಯ ವಾರ್ಷಿಕ ನಿರ್ವಹಣೆಗೆ ರು. 8.96 ಕೋಟಿ, ದಾಸ್ತಾನು ಮತ್ತು ವಾಹನ ಖರೀದಿಗೆ ರು. 1.28 ಕೋಟಿ, ತುಂಬೆ ಹೊಸ ಅಣೆಕಟ್ಟು ಕಾಮಗಾರಿಗೆ ರು. 3 ಕೋಟಿ, ಸರ್ಕಾರಿ ಅನುದಾನದ ವೆಚ್ಚ ಮತ್ತು ಇತರೆ ವೆಚ್ಚ ಸೇರಿ ಒಟ್ಟು ರು. 257.60 ಕೋಟಿ, ಉಳಿತಾಯ ರು. 6.04 ಲಕ್ಷ ನಿರೀಕ್ಷೆ.
2014ರಲ್ಲಿ ಡ್ಯಾಂ ಪೂರ್ಣ
ಪಾಲಿಕೆ ವ್ಯಾಪ್ತಿಗೆ 2006ನೇ ಸಾಲಿನ ಜನಸಂಖ್ಯೆಯ ಹೆಚ್ಚಳವನ್ನು ಆಧಾರವಾಗಿಟ್ಟುಕೊಂಡು ಒಟ್ಟು 160 ಎಂಎಲ್‌ಡಿ ನೀರು ಪೂರೈಕೆ ಯೋಜನೆಯನ್ನು ಕಾರ್ಯಗತಗೊಳಿಸಿದೆ. ತುಂಬೆ ಡ್ಯಾಂನಲ್ಲಿ ಈಗ ನೀರಿನ ಶೇಖರಣಾ ಸಾಮರ್ಥ್ಯ 45 ದಿನಕ್ಕೆ ಸೀಮಿತ. ಇದನ್ನು 120 ದಿನಕ್ಕೆ ಶೇಖರಿಸುವ ಸಾಮರ್ಥ್ಯ ಹೆಚ್ಚಿಸಲು ರು. 75.50 ಕೋಟಿ ವೆಚ್ಚದಲ್ಲಿ ಹೊಸ ವೆಂಟೆಡ್ ಡ್ಯಾಂ ನಿರ್ಮಾಣ ಪ್ರಾರಂಭವಾಗಿದೆ. ಇದಕ್ಕೆ ಪಾಲಿಕೆಯಿಂದ ಈವರೆಗೆ ರು. 19.75 ಕೋಟಿ ಪಾವತಿಸಲಾಗಿದೆ. 1ನೇ ಹಂತದ ರು. 100 ಕೋಟಿಯಲ್ಲಿ ರು. 8 ಕೋಟಿ, ಎಸ್‌ಎಫ್‌ಸಿ ಅನುದಾನದಲ್ಲಿ ರು. 6.42 ಕೋಟಿ, ಸಾಮಾನ್ಯ ನಿಧಿಯಲ್ಲಿ ರು. 5.33 ಕೋಟಿ ಪಾವತಿಸಲಾಗಿದೆ. ಹೊಸ ಡ್ಯಾಂ ಕಾಮಗಾರಿ ಶೇ.30 ಪೂರ್ಣಗೊಂಡಿದೆ. 2014 ಮೇ ಅಂತ್ಯಕ್ಕೆ ಡ್ಯಾಂ ಕಾಮಗಾರಿ ಪೂರ್ಣಗೊಳ್ಳಲಿದೆ.  
ಕ್ರೀಡೆಗೆ ಉತ್ತೇಜನ
ಪಾಲಿಕೆ ಸಹಭಾಗಿತ್ವದಲ್ಲಿ ನಡೆಯುವ ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮಗಳಿಗೆ ರು. 10 ಲಕ್ಷ, ಪ್ರಾಕೃತಿಕ ವಿಕೋಪದಡಿ ನೊಂದ ಸಂತ್ರಸ್ತರಿಗೆ ರು. 10 ಲಕ್ಷ ಸಹಾಯಧನ, ಕ್ರೀಡಾ ಪ್ರೋತ್ಸಾಹವಾಗಿ ರು. 15 ಲಕ್ಷ ಕಾದಿರಿಸಲಾಗಿದೆ.
ಸ್ವಸ್ತ ಕುಟೀರ
ಇದು ಈ ಬಾರಿಯ ಏಕೈಕ ಹೊಸದಲ್ಲದ ಹೊಸ ಯೋಜನೆ! ಮನೆ ರಿಪೇರಿಗೆ ಬಡತನ ರೇಖೆಗಿತಂ ಕೆಳಗಿನ ಎಸ್‌ಸಿ, ಎಸ್‌ಟಿ ಹೊರತುಪಡಿಸಿದ ಮಂದಿಗೆ ರು. 70 ಲಕ್ಷ ಕಾದಿರಿಸಲಾಗಿದೆ. ಇತರೆ ಮಂದಿಗೆ ಇದು ಉಪಯೋಗವಾಗಲಿದೆ. ಕುಟೀರ ಜ್ಯೋತಿಯಲ್ಲಿ ಎಸ್‌ಸಿ ಎಸ್‌ಟಿ ಹೊರತುಪಡಿಸಿ ಇತರೆ ಹಿಂದುಳಿದ ಕುಟುಂಬದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ರು. 2 ಲಕ್ಷ ಕಾದಿರಿಸಲಾಗಿದೆ.
ಈ ಬಾರಿಯೂ ಶಾಲಾ ಮಕ್ಕಳಿಗೆ ಜಾಗೃತಿ
ಕುಡಿವ ನೀರಿನ ಸದ್ಭಳಕೆ, ತುಂಬೆಯಲ್ಲಿ ನೀರು ಶೇಖರಣೆ, ನೀರಿನ ಶುದ್ಧೀಕರಣ, ನೀರು ಸರಬರಾಜು ಮತ್ತು ಒಳಚರಂಡಿ, ಘನತ್ಯಾಜ್ಯ ಸಂಗ್ರಹಣೆ/ನಿರ್ವಹಣೆ ಬಗ್ಗೆ ಸರ್ಕಾರಿ ಶಾಲೆಯ 5ರಿಂದ 7ನೇ ತರಗತಿ ಮಕ್ಕಳಿಗೆ ಅರಿವು ಮೂಡಿಸುವ ಬಗ್ಗೆ ನೀರಿನ ಮಹತ್ವ ತಿಳಿಸಿ ಉಳಿತಾಯ ಮಾಡಲು ಪ್ರೇರೇಪಿಸುವ ಹೊಸ ಯೋಜನೆ ಇದು. ಇದಕ್ಕೆ ರು. 5 ಲಕ್ಷ ಕಾದಿರಿಸಲಾಗಿದೆ.
ಅಭಿವೃದ್ಧಿ ಕಾಮಗಾರಿ
ಅಭಿವೃದ್ಧಿ ಕಾಮಗಾರಿಗೆ ವಿಂಗಡಿಸಿದ ರು. 17.55 ಕೋಟಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ರು. 13.50 ಕೋಟಿ, ಎಸ್‌ಸಿ ಎಸ್‌ಟಿ ಅಭಿವೃದ್ಧಿಗೆ ರು. 3.07 ಕೋಟಿ, ನಗರ ಬಡತನ ನಿರ್ಮೂಲನೆ ಮತ್ತು ಸಮಾಜ ಕಲ್ಯಾಣಕ್ಕೆ ರು. 98 ಲಕ್ಷ, ಅಂಗವಿಕಲ ಕಲ್ಯಾಣಕ್ಕೆ ಮೀಸಲು ನಿಧಿ ರು. 40.50 ಲಕ್ಷ, ಬಾಕಿ ಬಿಲ್ಲು ಪಾವತಿಗೆ ರು. 7 ಕೋಟಿ ನಿಗದಿ. ಕಳೆದ ಸಾಲಿನಲ್ಲಿ ಶೇ.7.25 ಕಾದಿರಿಸಿದ ಅನುದಾನದಲ್ಲಿ ರು. 93.60 ಲಕ್ಷದಲ್ಲಿ ರು. 45 ಲಕ್ಷ ಅನುಷ್ಟಾ ಅಧಿಕಾರಿಗಳಿಗೆ ವರ್ಗಾಯಿಸಲಾಗಿದೆ. ಅಂಗವಿಕಲರ ಕಲ್ಯಾಣಕ್ಕಾಗಿ ಶೇ.3 ಅನುದಾನದಲ್ಲಿ ಕಾದಿರಿಸಿದ ರು. 39 ಲಕ್ಷದಲ್ಲಿ 19.50 ಲಕ್ಷ ವರ್ಗಾಯಿಸಲಾಗಿದೆ.
ರಾಜ್ಯ ಸರ್ಕಾರಿ ಅನುದಾನ
ಮುಂದಿನ ಸಾಲಿಗೆ ರು. 18.19 ಕೋಟಿ ಎಸ್‌ಎಫ್‌ಸಿ ಮುಕ್ತ ನಿಧಿಯಲ್ಲಿ ಈವರೆಗೆ ರು. 9.59 ಕೋಟಿ ಬಿಡುಗಡೆಯಾಗಿದೆ. ತುಂಬೆ ಅಣೆಕಟ್ಟೆಗೆ ರು. 12.21 ಕೋಟಿಯಲ್ಲಿ ರು. 6.42 ಕೋಟಿ ಮುಂಗಡ ನೀಡಲಾಗಿದೆ. ಎಸ್‌ಸಿ ಎಸ್‌ಟಿ ಕಲ್ಯಾಣ ಕಾರ್ಯಕ್ರಮಕ್ಕೆ ರು. 2.18 ವರ್ಗಾಯಿಸಲಾಗಿದೆ. ಬಡಜನರ ಕಲ್ಯಾಣಕ್ಕೆ ರು. 1.31 ಕೋಟಿ ವಿಂಗಡಿಸಿದ್ದು, ರು. 69.54 ಲಕ್ಷ ವರ್ಗಾಯಿಸಿದೆ. ಅಂಗವಿಕಲ ಕಲ್ಯಾಣಕ್ಕೆ ರು. 54.57 ಲಕ್ಷದಲ್ಲಿ ರು. 28.77 ಲಕ್ಷ ನೀಡಲಾಗಿದೆ.
ನೂರು ಕೋಟಿ ಒಮ್ಮೆಲೇ ನೀಡಿ
ಮುಖ್ಯಮಂತ್ರಿ ವಿಶೇಷ ಅನುದಾನ ಪ್ರಥಮ ಹಂತದಲ್ಲಿ ರು. 100 ಕೋಟಿ ಬಿಡುಗಡೆಯಾಗಿದ್ದು, ರು. 86 ಕೋಟಿ ವಿನಿಯೋಗಿಸಲಾಗಿದೆ. 2ನೇ ಹಂತದಲ್ಲಿ ರು. 100 ಕೋಟಿ ಒಂದೇ ಕಂತಿನಲ್ಲಿ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ. ಈ ಯೋಜನೆಯಲ್ಲಿ 3 ವರ್ಷಗಳಲ್ಲಿ ವಾರ್ಷಿಕ ರು. 33.33 ಕೋಟಿ ಅನುದಾನ ಬಿಡುಗಡೆಯಾಗಬೇಕಿದ್ದು, ಕಳೆದ ಅವಧಿಯಲ್ಲಿ ರು. 15.44 ಕೋಟಿ, ಈ ಅವಧಿಯಲ್ಲಿ ರು. 84.56 ಕೋಟಿ ಬಿಡುಗಡೆಯಾಗಬೇಕಿದೆ.
ವೇತನ ಅನುದಾನ, ವಿದ್ಯುತ್ ಶುಲ್ಕ
ಪಾಲಿಕೆಯ ಸಿಬ್ಬಂದಿ ವೇತನಕ್ಕೆ ಕಳೆದ ಸಾಲಿನಲ್ಲಿ ನಿಗದಿಪಡಿಸಿದ ರು. 21.56 ಕೋಟಿಯಲ್ಲಿ ರು. 16.17 ಕೋಟಿ ಬಿಡುಗಡೆಯಾಗಿದೆ. ಈ ಸಾಲಿಗೆ ವಿತೇನ ಹೆಚ್ಚಿಸಿರುವುದರಿಂದ ರು. 23.72 ಕೋಟಿ ನಿರೀಕ್ಷಿಸಲಾಗಿದೆ.
ಬಸ್ಸು ತಂಗುದಾಣ, ಜಾಹಿರಾತು
ಪಾಲಿಕೆ ವ್ಯಾಪ್ತಿಯ ಎಲ್ಲ ಪ್ರಮುಖ ರಸ್ತೆಗಳನ್ನು ಅಗಲಗೊಳಿಸಿ ಕಾಂಕ್ರಿಟೀಕರಣ ಮಾಡಲಾಗುತ್ತಿದೆ. ಇಲ್ಲಿ ಬಸ್ಸು ತಂಗುದಾಣ ವ್ಯವಸ್ಥೆ ಮಾಡಲಾಗುವುದು.
  ಅಲ್ಲದೆ ನಿರ್ದಿಷ್ಟ ಸ್ಥಳಗಳಲ್ಲಿ ಜಾಹಿರಾತು ಫಲಕ ಅಳವಡಿಸಲು ಇ ಟೆಂಡರ್ ಕರೆಯಲಾಗಿದ್ದು, ತೆರಿಗೆ ರೂಪದಲ್ಲಿ ರು. 1.30 ಕೋಟಿ ಸಂಗ್ರಹ ನಿರೀಕ್ಷಿಸಲಾಗಿದೆ.
ಘನತ್ಯಾಜ್ಯ ಕರಾರು ಒಪ್ಪಂದ
60 ವಾರ್ಡ್‌ಗಳಲ್ಲಿ ಘನತ್ಯಾಜ್ಯ ಸಂಗ್ರಹ ನಿರ್ವಹಣೆಗೆ ಗುತ್ತಿಗೆ ನಿರ್ವಹಿಸುತ್ತಿರುವ 8 ಮಂದಿ ಗುತ್ತಿಗೆದಾರರಿಂದ ಮನೆ ಮನೆ ತ್ಯಾಜ್ಯ ಸಂಗ್ರಹ ಪ್ರಾರಂಭಿಸಲಾಗಿದೆ. ಇದನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಲು ನೂತನ ವಿಧಾನದ 3 ಪ್ರಾಕೇಜ್ ಟೆಂಡರ್‌ಗೆ ಸರ್ಕಾರ ಅನುಮೋದನೆ ನೀಡಿದ್ದು, ಸದ್ಯದಲ್ಲೇ ಕಾರ್ಯರೂಪಕ್ಕೆ ಬರಲಿದೆ. ಪಚ್ಚನಾಡಿಯಲ್ಲಿ ಘನತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ ಘಟಕವನ್ನು 6 ವರ್ಷಕ್ಕೆ ಗುತ್ತಿಗೆ ನೀಡಲಾಗಿದ್ದು, ಐಎಲ್ ಅಂಡ್ ಎಫ್‌ಎಸ್ ಸಂಸ್ಥೆ ಜತೆ ಕರಾರು ಒಪ್ಪಂದ ಮಾಡಲಾಗುತ್ತಿದೆ. 13ನೇ ಹಣಕಾಸು ಯೋಜನೆಯಲ್ಲಿ ಉರ್ವಾ ಮಾರುಕಟ್ಟೆ ಹೊರತುಪಡಿಸಿ, ಉಳಿದ ಕಡೆಗಳಲ್ಲಿ ಬಯೋಗ್ಯಾಸ್ ಸ್ಥಾವರ ಸ್ಥಾಪಿಸಲಾಗುವುದು. ಈ ಯೋಜನೆಯಲ್ಲಿ ಮೂಲ ಅನುದಾನ ಮತ್ತು ರಸ್ತೆ, ಸೇತುವೆ ಯೋಜನೆಗಳಿಗೆ ರು. 15.21 ಕೋಟಿ ಬಿಡುಗಡೆಯಾಗಿದೆ.
ಎಸ್‌ಸಿ, ಎಸ್‌ಟಿ ಅಭಿವೃದ್ಧಿ
ಶೇ.22.75 ಯೋಜನೆಯಲ್ಲಿ ರು. 3.07 ಕೋಟಿ ಕಾದಿರಿಸಲಾಗಿದ್ದು, 2011-12ನೇ ಸಾಲಿನಲ್ಲಿ ರು. 295.75 ಲಕ್ಷದಲ್ಲಿ ರು. 1 ಕೋಟಿ ಬಿಡುಗಡೆಯಾಗಿದ್ದು, ಉಳಿದ ಮೊತ್ತ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಬಿಪಿಎಲ್ ಕುಟುಂಬಕ್ಕೆ ಕಿಟ್ ನೀಡುವ ಕಳೆದ ಬಾರಿ ಘೋಷಿಸಿದ್ದ ನಗಕ್ಕೊಂದು ಸ್ವಾಗತ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ.
ಕಚೇರಿ ಮಾಹಿತಿ ಆನ್‌ಲೈನ್‌ಗೆ
ಕಚೇರಿ ಸಿಬ್ಬಂದಿಯ ಕಾರ್ಯಕ್ಷಮತೆ ಹೆಚ್ಚಿಸಲು, ಸಮಯ ಪರಿಪಾಲನೆಗೆ ಹೆಚ್ಚಿನ ವಿಭಾಗಗಳಲ್ಲಿ ಬಯೋವುಟ್ರಿಕ್ ಯಂತ್ರ ಅಳವಡಿಕೆ. ನಾಗರಿಕರಿಗೆ ಉತ್ತಮ ಸೌಲಭ್ಯಕ್ಕೆ ಎಲ್ಲ ವಿಭಾಗಗಳ ಕಂಪ್ಯೂಟರೀಕರಣಕ್ಕೆ ರು. 3 ಕೋಟಿ ಅನುದಾನಕ್ಕೆ ಪ್ರಸ್ತಾವನೆ. ಮುಂದಿನ ದಿನಗಳಲ್ಲಿ ಕಚೇರಿಯ ಎಲ್ಲ ಮಾಹಿತಿ ಆನ್‌ಲೈನ್‌ಗೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments