ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

24x7 ನೀರು ಬೇಕಾದರೆ ದರ ಹೆಚ್ಚಳ ಖಚಿತ!

Mainashree
Updated On : 18 Feb 2013, 10:59 am

 ಜಿತೇಂದ್ರ ಕುಂದೇಶ್ವರ
ಮಂಗಳೂರು: ಮಹಾನಗರದ ಜನರಿಗೆ 24 ಗಂಟೆ ನೀರು ಬೇಕು, ಖಾಸಗಿ, ಸರ್ಕಾರ ಪಾಲುಗಾರಿಕೆಯಲ್ಲಿ ಯೋಜನೆ ಜಾರಿಗೆ ತಂದರೆ ನೀರಿನ ದರ ಹೆಚ್ಚಳ ಖಚಿತ. ಇದರ ಹೊರತಾಗಿ ಸಾಲ ಪಡೆದು ಯೋಜನೆ ಜಾರಿಗೊಳಿಸಲು ಮುಂದಾದರೆ ಆಗ ರಾಜ್ಯ ಸರ್ಕಾರ ನಿಗದಿ ಪಡಿಸಿದ ನೀರಿನ ದರ ಜಾರಿ ಮಾಡಲೇ ಬೇಕು. ಹೀಗಾಗಿ ಮಹಾನಗರದಲ್ಲಿ ನೀರಿನ ದರ ಹೆಚ್ಚಳ ಅನಿವಾರ್ಯವಾಗಿ ಪರಿಣಮಿಸಿದೆ.
24್ಗ7 ನೀರು ಸೌಲಭ್ಯ ನಗರದಲ್ಲಿ ಜಾರಿಗೆ  120 ಕೋಟಿ ಬೇಕು. ಯೋಜನೆ ಜಾರಿ ಮಾಡದೆ ಹೋದರೆ ಕೇಂದ್ರ ಸರ್ಕಾರ ತಾನು ನೀಡಿದ ಎಲ್ಲ ಅನುದಾನವನ್ನು ಸಾಲ ರೂಪವಾಗಿ ಪರಿಗಣಿಸುವುದಾಗಿ ಸ್ಥಳೀಯಾಡಳಿತಕ್ಕೆ ಪತ್ರ ಬರೆದಿದೆ. ಇದು ಎಲ್ಲ ನಗರದ ಸ್ಥಳೀಯಾಡಳಿತಕ್ಕೂ ಅನ್ವಯವಾಗುತ್ತದೆ.
ಆಕ್ರೋಶಕ್ಕೆ ಗುರಿಯಾಗುವ ಭೀತಿ: ಸದಸ್ಯರ ಅವಧಿ ಈ ತಿಂಗಳಲ್ಲಿ ಮುಗಿಯುತ್ತಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಯಾವ ಕಾರ್ಪೊರೇಟರ್ ಕೂಡಾ ನೀರು ದರ ಹೆಚ್ಚಳ ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗುವ ಧೈರ್ಯ ಮಾಡುತ್ತಿಲ್ಲ. ಜನಪ್ರತಿನಿಧಿಗಳು ಇಲ್ಲದ ಪಾಲಿಕೆಯಲ್ಲಿ ಅಧಿಕಾರಿಗಳು ತೆಗೆದುಕೊಂಡ ನಿಧಾರಗಳಿಗೆ ಬೆಲೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ರಾಜ್ಯ ಸರ್ಕಾರ ನೀಡಿದ ಆದೇಶ ಪಾಲನೆ ಮಾಡಬಹುದಾಗಿದೆ.
ತಕ್ಷಣ ಚುನಾವಣೆ ಘೋಷಣೆಯಾದರೆ ಯಾವುದೇ ನಿರ್ಣಯ ಸಾಧ್ಯವಿಲ್ಲ. ಚುನಾವಣೆ ಮುಂದೂಡಿ ಆಡಳಿತಾಧಿಕಾರಿ ನೇಮಿಸಿದರೆ, ಸರ್ಕಾರದ ಆದೇಶ ಜಾರಿಗೆ ತರಬಹುದಾಗಿದೆ.
ರಾಜ್ಯದ ನಗರಗಳಲ್ಲಿ ನೀರು ದರ ಸರ್ಕಾರವೇ ನಿಗದಿ ಮಾಡಿದ್ದು, ಪಾಲಿಕೆ ಅದನ್ನು ಪಾಲಿಸಿದರೆ ಸಮಸ್ಯೆ ಆಗುವುದಿಲ್ಲ. ಕಾರ್ಪೊರೇಟರ್‌ಗಳಿಗೂ ನೀರಿನ ಬೆಲೆ ಹೆಚ್ಚಳ ನಾವು ಮಾಡಿದ್ದಲ್ಲ, ಅಧಿಕಾರಿಗಳು ಎಂದು ಹೇಳಬಹುದು. ಅಧಿಕಾರಿಗಳಿಗೆ ಚುನಾವಣೆಯಲ್ಲಿ ನಿಲ್ಲುವ ಅವಶ್ಯಕತೆ ಇಲ್ಲವಲ್ಲ!  
'ನೀರಿನ ಬಳಕೆಗೆ ಮೀಟರ್ ಹಾಕಲಾಗಿದೆ. ಆದರೆ ಬಹುತೇಕ ಮೀಟರ್‌ಗಳು ಕೆಲಸ ಮಾಡುತ್ತಿಲ್ಲ.  ನೀರಿನ ದರವೂ ಹಳೆಯದು. ಮೀಟರ್ ಇಲ್ಲವಾದರೆ ಸರಾಸರಿ ನೀರಿನ ಬಿಲ್ ಹಾಕುವ ಪದ್ಧತಿ ಇದೆ. ಹೀಗಾಗಿ ನೀರು ಬಳಸುವಾಗ ಹೆಚ್ಚಿನವರು ಎಚ್ಚರ ವಹಿಸುವುದಿಲ್ಲ. ಮನೆಯಲ್ಲಿ ಅಗತ್ಯ ಇದ್ದಾಗ ಫ್ಯಾನ್ ಹಾಕುವ, ಲೈಟ್ ಹಾಕುವ ಕ್ರಮ ಇದೆ. ನೀರು ಬಳಸುವಾಗ ಇದೇ ಎಚ್ಚರಿಕೆ ಬರಬೇಕು. ಮೆಸ್ಕಾಂ ಬಿಲ್‌ನಂತೆಯೇ ಕಟ್ಟು ನಿಟ್ಟಾಗಿ ಬಿಲ್  ನೀಡಿದರೆ ನೀರಿನ ಪೋಲೂ ತಪ್ಪಬಹುದು' ಎನ್ನುತ್ತಾರೆ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್.
ಮೀಟರ್ ಹಾಕಲು ಖಾಸಗಿ ಸಂಸ್ಥೆಗೆ ವಹಿಸಿದರೆ ಲಾಭದ ಆಸೆಯಿಂದ ಸಂಸ್ಥೆ ಬದ್ಧತೆಯಿಂದ ಕೆಲಸ ಮಾಡುತ್ತದೆ. ಮೀಟರ್ ಹಾಳಾದ ತಕ್ಷಣ ಹೊಸದಾಗಿ ಹಾಕುತ್ತಾರೆ. ಮೀಟರ್‌ಗೆ 10 ಸಾವಿರ ಬೆಲೆ ಇದೆ. ಹೊಸ ವ್ಯವಸ್ಥೆಯಲ್ಲಿ ಮೀಟರ್ ಹಾಳಾದರೂ ಗೊತ್ತಾಗುತ್ತದೆ, ನೀರು ಬಳಸಿದ ಪ್ರಮಾಣವೂ ಕೇಂದ್ರಸ್ಥಾನದಲ್ಲಿ ತಿಳಿಯುತ್ತದೆ ಎನ್ನುತ್ತಾರೆ ಆಯುಕ್ತರು.
'ಈಗ ನೀರು ಸರಬರಾಜಿನಿಂದ ಪಾಲಿಕೆಗೆ ನಷ್ಟ ಆಗುತ್ತಿಲ್ಲ. ಹೀಗಾಗಿ ಖಾಸಗಿಗೆ ಕೊಡದೆ ಇದೇ ದರದಲ್ಲಿ ನೀರು ಒದಗಿಸಬಹದು' ಎನ್ನುವುದು ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ಅಭಿಪ್ರಾಯ.
ಡೀವಿ ಯೋಜನೆ: ದಿನದ 24 ಗಂಟೆ ನೀರು ನೀಡಲು ಯೋಜನೆ ಹಾಕಿಕೊಳ್ಳುವುದಾಗಿ ಸದಾನಂದ ಗೌಡ ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದಾಗ ಹೇಳಿದ್ದರು. ಪಾಲಿಕೆಯಲ್ಲಿ ಖಾಸಗಿ, ಸಾರ್ವಜನಿಕ  ಮಾದರಿಯಲ್ಲಿ ಯೋಜನೆ ರೂಪಿಸುವ ಮಾತು ಬಂದಾಗ 'ನೀರು ಖಾಸಗೀಕರಣ' ವಿರುದ್ಧ ಪ್ರತಿಭಟನೆ ಕೇಳಿಬಂತು. ಆಗ ಸಾಲ ಮಾಡಿ ಯೋಜನೆ ಜಾರಿಗೆ ತರಲು ಕೌನ್ಸಿಲ್ ನಿರ್ಧರಿಸಿತು.
ಹುಬ್ಬಳಿ- ಧಾರವಾಡ ಮಾದರಿಯಲ್ಲಿ, ದರ ಹೆಚ್ಚಿಸದೆ ಪಾಲಿಕೆಯೇ ಖುದ್ದು ಹಣ ಹಾಕಿ ಯೋಜನೆ ಜಾರಿಗೆ ತರುವ ನಿರ್ಧಾರಕ್ಕೆ ಬಂದ ಕೌನ್ಸಿಲ್ ಸರ್ಕಾರಕ್ಕೆ ಪತ್ರ ಬರೆಯಿತು. ಸರ್ಕಾರ 'ಸಾಲ ತೆಗೆದುಕೊಳ್ಳಿ, ಆದರೆ ಸರ್ಕಾರ ನಿಗದಿ ಪಡಿಸಿದ ದರ ಒಪ್ಪಿಕೊಳ್ಳಬೇಕು' ಎಂದು ಸೂಚಿಸಿತು.
ಹುಬ್ಬಳ್ಳಿ ಧಾರವಾಡ 8 ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಮಾಡಿ ಯಶಸ್ವಿಯಾಗಿದೆ. ಇಲ್ಲಿನ ಕಾರ್ಪೊರೇಟರ್‌ಗಳು ಅದನ್ನು ನೋಡಿ ಬಂದಿದ್ದಾರೆ. ಅಲ್ಲಿನ ಬಾಕಿ ವಾರ್ಡ್‌ಗಳಿಗೆ ಮುಖ್ಯಮಂತ್ರಿ ಅನುದಾನ ಒದಗಿಸಿದರು. ಇಲ್ಲಿ ಕನಿಷ್ಠ ಪೈಲಟ್ ಯೋಜನೆಯಾದರೂ ಜಾರಿಗೆ ತರಬೇಕು. ಪ್ರಭಾವ ಇದ್ದರೆ ಸರ್ಕಾರದ ಅನುದಾನ ಕೂಡಾ ಪಡೆಯಬಹುದು ಎನ್ನುತ್ತಾರೆ ಆಯುಕ್ತರು.  
ಕೇಂದ್ರ ಸರ್ಕಾರ ಪತ್ರ ಪಾಲಿಕೆ ಅನುದಾನ ನೀಡಿದ್ದೇವೆ, ಯೋಜನೆ ಪಾಲಿಸದಿದ್ದರೆ ಸಾಲವಾಗಿ ಪರಿಗಣಿಸುತ್ತೇವೆ. ಪುನಃ ಪಾಲಿಕೆ ಮುಂದೆ ಈ ಪತ್ರ ಇಡುತ್ತೇವೆ. ಯಾವುದೇ ಮಾದರಿ ಇದ್ದರೂ ಅಜೆಂಡಾದಲ್ಲಿ ಬರುವಂತೆ ಮಾಡಬೇಕಾಗಿದೆ ಎನ್ನುತ್ತಾರೆ ಆಯುಕ್ತರು.
ಮಂಗಳೂರಿಗರಿಗೆ ನೀರು ದರ ಹೆಚ್ಚಳ ಆಗಬಾರದು ಎಂದಿದ್ದರೆ ಮುಂದಿನ ಸಿಎಂ ಬಜೆಟ್‌ನಲ್ಲಿ ನೀರು ಸೌಲಭ್ಯಕ್ಕೆ 120 ಕೋಟಿ ಅನುದಾನ ಒದಗಿಸಲಿ ಎಂದು ಪ್ರಾರ್ಥನೆ ಮಾಡಬೇಕಷ್ಟೆ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement