ಕಾರಂತರ ಹುಟ್ಟೂರಲ್ಲಿ ರಂಗಾಯಣ ಕಲಾವಿದರು
ಮೌನೇಶ ವಿಶ್ವಕರ್ಮ
ಬಂಟ್ವಾಳ: 'ಬಿ.ವಿ. ಕಾರಂತರು ನಮಗೆ ಗುರುಗಳು, ಅವರು ನಮಗೆ ದಾರ್ಶನಿಕರು, ಅವರೇ ನಮಗೆ ದೈವ...ಅವರೇ ನಮಗೆ ಸರ್ವಸ್ವ...' ಹೀಗೆ ಭಾವನಾತ್ಮಕವಾಗಿ ನುಡಿದವರು ಮೈಸೂರು ರಂಗಾಯಣದ ಕಲಾವಿದರು.
ರಂಗಾಯಣದ ಶಿಲ್ಪಿ, ರಂಗದಿಗ್ಗಜ ಬಿ.ವಿ. ಕಾರಂತರ ಹುಟ್ಟೂರು ಮಂಚಿಯಲ್ಲಿ ಶುಕ್ರವಾರ ರಂಗಗೀತೆ ಹಾಡುವ ಸಂದರ್ಭ ಕಲಾವಿದರು ಭಾವಪರವಶರಾದ ಸಂದರ್ಭವದು. ಕಾರಂತರ ಮಾರ್ಗದರ್ಶನದಲ್ಲಿ ಹುಟ್ಟಿ ಬೆಳೆದು ಪ್ರಸಿದ್ಧಿ ಪಡೆದ ಮೈಸೂರು ರಂಗಾಯಣ, ರಂಗಾಯಣದ ಕಲಾವಿದರು ನಾಟಕೋತ್ಸವಕ್ಕೆಂದು ಮಂಚಿಗೆ ಆಗಮಿಸಿದವರು ಕಾರಂತರ ಹುಟ್ಟೂರ ಮಣ್ಣಿನಲ್ಲಿ ನಡೆದಾಡಿ ಕಾರಂತ ಸ್ಮರಣೆಮಾಡಿಕೊಂಡರು.
ನಾಟಕೋತ್ಸವ ಉದ್ಘಾಟನೆ ಸಂದರ್ಭ ರಂಗಗೀತೆ ಹಾಡಲೆಂದು ರಂಗಕ್ಕೆ ಬಂದ ರಂಗಾಯಣದ 13 ಮಂದಿ ಕಲಾವಿದರು, ಕಾರಂತರನ್ನು ಮನಸಾರೆ ಸ್ಮರಿಸಿಕೊಂಡರು. ಕಾರಂತರನ್ನು ನೆನೆದು ಮಾತನಾಡಿದ, ಮಂಜುನಾಥ ಬೆಳಕೆರೆ, ಕಾರಂತರಿಂದ ನಾವು ನಮ್ಮ ಬದುಕು ಕಟ್ಟಿಕೊಂಡಿದ್ದೇವೆ. ಕಳೆದ 25 ವರ್ಷಗಳ ಹಿಂದೆ ಮೈಸೂರಿಗೆ ಬಂದ ಅವರು ಎಲ್ಲೆಲ್ಲೋ ಇದ್ದ ನಮ್ಮೆಲ್ಲರನ್ನು ಒಟ್ಟು ಗೂಡಿಸಿದರು. ಏನೂ ಅಲ್ಲದ ನಮ್ಮನ್ನು ಏನೇನೋ ಮಾಡುವ ಹಾಗೆ ತಿದ್ದಿದ್ದಾರೆ, ತೀಡಿದ್ದಾರೆ ಎನ್ನುವಾಗ ಅವರ ಕಣ್ತುಂಬಿ ಬಂತು. ದೇಶದಲ್ಲಿ ಅತ್ಯಂತ ಶ್ರೇಷ್ಠ ಕಲಾವಿದರು ಇರುವ ತಂಡ ಎನ್ನುವ ಕೀರ್ತಿಗೆ ಪಾತ್ರವಾಗಿದ್ದರೆ ಅದಕ್ಕೆ ಕಾರಣ ಕಾರಂತರು ಎಂದಾಗ ಪ್ರೇಕ್ಷಕ ಸಮೂಹ ಚಪ್ಪಾಳೆ ನೀಡಿ ಅಭಿನಂದಿಸಿತು.
ನನಪುಗಳಿನ್ನೂ ಜತನ: ಬಿ.ವಿ. ಕಾರಂತರ ವಿಚಾರಶಕ್ತಿ ಅಗಾಧ. ಭಾರತೀಯ ರಂಗಭೂಮಿಯನ್ನು ಬದಲಿಸಿದ ಕೀರ್ತಿ ಕಾರಂತರದ್ದು. ಅವರ ಸಂಗೀತ ಹಾಗೂ ದೃಶ್ಯ ಕಲ್ಪನೆಗಳು ಆಧುನಿಕ ರಂಗಭೂಮಿಯನ್ನು ಹೊಸ ದಿಕಿನತ್ತ ಕೊಂಡೊಯ್ದಿದೆ. ಅವರ ವಿಚಾರ ಶಕ್ತಿಯ ಹಿಂದೆ ಕರಾವಳಿ ಸಂಸ್ಕೃತಿಯೇ ಅಡಗಿದೆ. ಕಾರಂತರ ನಿರ್ದೇಶನದ ಗೋಕುಲ ನಿರ್ಗಮನ, ಕಿಂದರಿ ಜೋಗಿ. ಚಂದ್ರಹಾಸ, ಕತ್ತಲೆ ಬೆಳಕು... ಅಗ್ನಿವರ್ಣ ಎಲ್ಲವೂ ಅದ್ಭುತವಾದದ್ದು. ಅವರ ನೆನಪಿಗೋಸ್ಕರ ಅವರ ನಿರ್ದೇಶನದ ನಾಟಕಗಳನ್ನು ನಾವು ಇನ್ನೂ ಜತನವಾಗಿಟ್ಟುಕೊಂಡಿದ್ದೇವೆ ಎಂದಾಗ ಅವರ ಸ್ವರ ಗದ್ಗದಿತವಾಯಿತು.
ಕಾರಂತರು ಮೋಡಿಗಾರ, ಹಾಡುಗಾರ.. ಅವರ ಶಿಷ್ಯಂದಿರಾದ ನಾವು ಮಾಡುವ ಪ್ರತೀ ಕೆಲಸದಲ್ಲೂ ಕಾರಂತರು ಆವರಿಸಿಕೊಂಡಿದ್ದಾರೆ ಎನ್ನುವಾಗಲಂತೂ ರಂಗ ಗೀತೆಗೆಂದು ರಂಗದ ಮೇಲೆ ಕುಳಿತ್ತಿದ್ದ ಎಲ್ಲಾ ಕಲಾವಿದರ ಕಣ್ಣುಗಳಲ್ಲಿ ನೀರಹನಿ ಇಣುಕಿತ್ತು. ಒಟ್ಟಿನಲ್ಲಿ ಬಿ.ವಿ. ಕಾರಂತರ ನೆನಪಿನಲ್ಲಿ ನಡೆದ ನಾಟಕೋತ್ಸವಕ್ಕೆ ಅವರ ಪಟ್ಟ ಶಿಷ್ಯರ ಆಗಮನ, ನಮನ, ನಟನೆ, ಗಾಯನ ಹೆಚ್ಚಿನ ಕಳೆ ಒದಗಿಸಿತ್ತು. ನಾಟಕೋತ್ಸವ ಸಂಘಟಿಸಿದ್ದ ಮಂಚಿಯ ರಂಗಭೂಮಿಕಾ ಟ್ರಸ್ಟಿಗೂ ಒಂದು ಬಗೆಯ ಸಂತೃಪ್ತ ಭಾವ.