ಕೊಚ್ಚುವೇಲಿ-ಅಮೃತಸರ ರೈಲು ಉಡುಪಿ ನಿಲುಗಡೆಗೆ ಆಗ್ರಹ
ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದಿದ್ದರೆ ಏಪ್ರಿಲ್‌ನಲ್ಲಿ ರೈಲು ರೋಕೋ: ರೇಲ್ವೆ ಯಾತ್ರಿ ಸಂಘ ಎಚ್ಚರಿಕೆ
ಉಡುಪಿ: ಎರ್ನಾಕುಲಂ- ಪೂನಾದಿಂದ ಡಿ. 12 ರಂದು ಹೊರಡುವ ರೈಲಿಗೆ ಉಡುಪಿಯಲ್ಲಿ ನಿಲುಗಡೆ ಸಿಕ್ಕಿದೆ, ಆದರೆ, ಕೊಚ್ಚುವೇಲಿಯಿಂದಾಗಿ ಡೆಹ್ರಾಡೂನ್ ಮತ್ತು ಕೊಚ್ಚುವೇಲಿಯಿಂದ ಅಮೃತಸರಕ್ಕೆ ಹೋಗುವ ರೈಲಿಗೆ ಇನ್ನೂ ಕೂಡ ಉಡುಪಿಯಲ್ಲಿ ನಿಲುಗಡೆ ಸಿಕ್ಕಿಲ್ಲ.
ತಕ್ಷಣ ಇದರ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೇ ಏಪ್ರಿಲ್‌ನಲ್ಲಿ ರೇಲ್ ರೋಕೋ ಮಾಡುವುದಾಗಿ ರೇಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್. ಡಯಾಸ್ ಎಚ್ಚರಿಸಿದ್ದಾರೆ.
ಫೆ. 26ರಂದು ಮಂಡನೆಯಾಗುವ ಭಾರತೀಯ ರೇಲ್ವೆ ಬಜೆಟ್ ಹಿನ್ನೆಲೆಯಲ್ಲಿ ಉಡುಪಿ ರೇಲ್ವೆ ಯಾತ್ರಿ ಸಂಘದ ವತಿಯಿಂದ ಭಾನುವಾರ ಬಳಕೆದಾರರ ವೇದಿಕೆಯ ಸಭಾಂಗಣದಲ್ಲಿ ನಡೆದ ಪೂರ್ವಾಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಟ್ಯಾಕ್ಸಿಗಳಿಗೂ ಪ್ರಿಪೇಯ್ಡ್ ವ್ಯವಸ್ಥೆಗೆ ಆಗ್ರಹ: ಇಂದ್ರಾಳಿ ರೈಲು ನಿಲ್ದಾಣದಲ್ಲಿ ಆಟೋ ರಿಕ್ಷಾಗಳಿಗೆ ಪ್ರಿಪೇಯ್ಡ್ ಕೌಂಟರ್ ತೆರೆದದ್ದು ಪ್ರಯಾಣಿಕರಿಗೆ ಖುಷಿ ತಂದಿದೆ. ಆದ್ದರಿಂದ ಟ್ಯಾಕ್ಸಿಗಳಿಗೂ ಈ ಒಂದು ಸೌಲಭ್ಯ ಮಾಡಬೇಕು ಎಂಬ ಬೇಡಿಕೆ ಬಂದಿದೆ ಎಂದವರು ಪ್ರಸ್ತಾಪ ಮುಂದಿಟ್ಟಾಗ ಸಭೆಯಲ್ಲಿದ್ದವರೆಲ್ಲರೂ ಅದಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಕೊಂಕಣ್ ರೇಲ್ವೆ ಆದಾಯ ಜಾಸ್ತಿ ಇದೆ ಎಂದು ಹೇಳುತ್ತಾರೆ. ನಿಜಾಂಶ ಎಂದರೆ ಈ ರೈಲಿನ ಆದಾಯ ತುಂಬಾ ಕಡಿಮೆ ಇದೆ. ಕೊಂಕಣ್ ರೇಲ್ವೆಯು ಮಾರಾಟ ಮಾಡುವ ಬಾಂಡ್‌ಗಳನ್ನು ಹೆಚ್ಚು ಮಾಡಲು ಅಧಿಕಾರ ನೀಡಬೇಕು ಮತ್ತು ಉಳ್ಳಾಲ- ಪಣಂಬೂರು ಯಾರ್ಡ್‌ಗೆ ಎನೆಲ್ಲಾ ಆದಾಯ ಬರುತ್ತದೆ ಅದು ಕೊಕಂಣ್ ರೈಲಿಗೂ ಸಿಗಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಆಗ್ರಹಿಸಲಾಗಿದೆ ಎಂದು ಅವರು ಹೇಳಿದರು. ಇದೀಗ ಕೊಂಕಣ್ ರೇಲ್ವೆಯ ಕಚೇರಿ ಬೇಲಾಪುರದಲ್ಲಿ ಇದೆ. ಆದರೆ, ಅಲ್ಲಿಗೆ ರೈಲು ಹೋಗುತ್ತಿಲ್ಲ. ಆದ್ದರಿಂದ ಆ ಕಚೇರಿಯನ್ನು ಮಡಗಾಂವ್‌ಗೆ ವರ್ಗಾಯಿಸಬೇಕು ಎಂಬ ಪ್ರಸ್ತಾಪ ಮುಂದಿಟ್ಟ ಡಯಾಸ್, ಈ ಕುರಿತು ಸದಸ್ಯರ ನಿರ್ಧಾರ ತೆಗೆದುಕೊಂಡು ಕೊನೆಗೆ ರೇಲ್ವೆ ಅಧಿಕಾರಿಗಳಿಗೆ ಒತ್ತಾಯಿಸಲಾಗುವುದು ಎಂದರು.
ನಮ್ಮಲ್ಲಿ ತುಂಬಾ ಜನ ಅನೂಕೂಲಸ್ಥರು ಇದ್ದಾರೆ. ಅವರಲ್ಲಿ ಕೆಲವರಾದರೂ ದಾನಿಗಳು ಮುಂದೆ ಬಂದು ಉಡುಪಿಯಿಂದ ಬಾರ್ಕೂರು, ಇನ್ನಂಜೆ, ಕಟಪಾಡಿ ಇನ್ನಿತರ ಕಡೆಗಳಿಗೆ ಹೆಚ್ಚುವರಿ ರೇಲ್ವೆ ಹಳಿ ಮಾಡಲು ಸಹಕರಿಸಿದರೆ ಸರ್ಕಾರವನ್ನು ಆಗ್ರಹಿಸುವ ಅವಶ್ಯಕತೆಯೇ ಬೇಕಾಗುವುದಿಲ್ಲ ಎಂಬ ಅಭಿಪ್ರಾಯವನ್ನು ಈ ಸಂದರ್ಭ ಮುಂದಿಟ್ಟರು.
ನಿಲುಗಡೆ ಅವಧಿ ಹೆಚ್ಚು ಬೇಡ: ಯಶವಂತಪುರ- ಕಾರವಾರ ರೈಲು ಪ್ರತಿಯೊಂದು ಸ್ಟೇಷನ್‌ನಲ್ಲಿ 5 ನಿಮಿಷ ನಿಲ್ಲಿಸುವಲ್ಲಿಗೆ 15- 20 ನಿಮಿಷ ನಿಂತು ಹೋಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಕಷ್ಟವಾಗುತ್ತಿದೆ. ಇದರ ಬಗ್ಗೆ ಕ್ರಮಕೈಗೊಳ್ಳುವಂತೆ ರೇಲ್ವೆ ಅಧಿಕಾರಿಗೆ ಲಿಖಿತ ದೂರನ್ನು ನೀಡುವುದಾಗಿ ಡಯಾಸ್ ತಿಳಿಸಿದರು.
ಬಳಕೆದಾರರ ವೇದಿಕೆ ಸಂಚಾಲಕ ದಾಮೋದರ್ ಐತಾಳ್, ರೇಲ್ವೆ ಯಾತ್ರಿ ಸಂಘದ ಉಪಾಧ್ಯಕ್ಷ ಕೆ.ಆರ್. ಮಂಜ ಹಾಗೂ ಇತರ ಸದಸ್ಯರು ಇದ್ದರು.