ದಲಿತರಿಗೆ ಮೀಸಲಿಟ್ಟ ಭೂಮಿ ನೀಡದ್ದಕ್ಕೆ ಇಂದು ಪ್ರತಿಭಟನೆ
ಉಪ್ಪಿನಂಗಡಿ: ಕಡಬ ಸಮೀಪದ 102ನೇ ನೆಕ್ಕಿಲಾಡಿ ಗ್ರಾಮದ ಕರ್ಮಾಯಿ ಎಂಬಲ್ಲಿ ದಲಿತರಿಗೆಂದು ಮೀಸಲಿಟ್ಟ ಡಿ.ಸಿ. ಮನ್ನಾ ಭೂಮಿಯನ್ನು ಇತರರು ಆಕ್ರಮಿಸಿಕೊಂಡಿರುವುದನ್ನು ತೆರವುಗೊಳಿಸಿ ದಲಿತರಿಗೆ ನೀಡಬೇಕು ಎಂಬ ಹೈಕೋರ್ಟ್ ತೀರ್ಪು ನೀಡಿದ್ದರೂ, ಈ ತೀರ್ಪಿನ್ನು ಅನುಷ್ಠಾನಿಸಲು ಜಿಲ್ಲಾಧಿಕಾರಿ ಆದೇಶ ನೀಡಿದ್ದರೂ ಯಾವುದೇ ಪ್ರಗತಿಯಾಗಿಲ್ಲ ಎಂದು ಆರೋಪಿಸಿ ಸೋಮವಾರ ಕಡಬದಲ್ಲಿ ದಸಂಸ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಸ್.ಪಿ. ಆನಂದ ಹೇಳಿದ್ದಾರೆ.
ಕಡಬ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ದಸಂಸ ಸಭೆಯಲ್ಲಿ ಅವರು ಮಾತನಾಡಿ, ಕರ್ಮಾಯಿಯಲ್ಲಿ ಸುಮಾರು 20 ಎಕ್ರೆ ಡಿ.ಸಿ. ಮನ್ನಾ ಭೂಮಿಯನ್ನು 10 ಮಂದಿ ಅಕ್ರಮಿಸಿಕೊಂಡಿದ್ದರು. ಅದರಲ್ಲಿ ಈಗಾಗಲೇ ಎಂಟು ಮಂದಿ ಅತಿಕ್ರಮಿಸಿದ ಭೂಮಿಯನ್ನು ಸರ್ಕಾರದ ಸುಪರ್ದಿಗೆ ನೀಡಲಾಗಿದೆ. ಈ ಎಂಟು ಮಂದಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದು ವಜಾವಾಗಿದೆ. ಇದೀಗ ಹೈಕೋರ್ಟ್ನಲ್ಲಿ ಎ.ಪಿ. ಚೆರಿಯನ್ ಎಂಬವರ ದಾವೆ ವಜಾಗೊಂಡಿರುತ್ತದೆ ಎಂದು ತಿಳಿಸಿದರು.
ತಾಲೂಕು ಸಂಚಾಲಕ ಕೊರಗಪ್ಪ ಮಾತನಾಡಿ, ಡಿ.ಸಿ. ಮನ್ನಾ ಭೂಮಿಯ ಬಗ್ಗೆ ಜಿಲ್ಲಾಧಿಕಾರಿ ಆದೇಶವಿದ್ದರೂ ಕಡಬ ಕಂದಾಯ ಅಧಿಕಾರಿಗಳು ದಲಿತರ ಬಗ್ಗೆ ಕಾಳಜಿ ಇಲ್ಲದೆ ದಲಿತ ದೌರ್ಜನ್ಯ ಎಸಗುತ್ತಿದ್ದಾರೆ. ಈ ಬಗ್ಗೆ ಈ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ಹೂಡಲಾಗುವುದು ಎಂದು ಹೇಳಿದರು.