ಪರವಾನಗಿ ನೀಡದಂತೆ ರಿಕ್ಷಾ ಚಾಲಕ- ಮಾಲೀಕರ ಅಂಚೆ ಚಳವಳಿ
ಪುತ್ತೂರು: ತಾಲೂಕಿನಲ್ಲಿ ರಿಕ್ಷಾಗಳ ಸಂಖ್ಯೆ ಹೆಚ್ಚಾಗಿದ್ದು, ಮುಂದಿನ 5 ವರ್ಷಗಳ ತನಕ ತಾಲೂಕಿನಲ್ಲಿ ರಿಕ್ಷಾಗಳಿಗೆ ನೂತನ ಪರವಾನಗಿ ನೀಡುವುದನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಿಕ್ಷಾ ಚಾಲಕ ಮಾಲೀಕರ ಸಂಘದ ವತಿಯಿಂದ 2ನೇ ಹಂತದ ಪೋಸ್ಟ್‌ಕಾರ್ಡ್ ಚಳವಳಿಯನ್ನು ನಡೆಸಲಾಯಿತು. ಜಯ ಕರ್ನಾಟಕ ಸಂಘಟನೆಯ ಕಾರ್ಯದರ್ಶಿ ಖಾದರ್ ಹಾಜಿ ಕೂರ್ನಡ್ಕ ಅವರು ಅಂಚೆ ಡಬ್ಬಿಗೆ ಕಾರ್ಡ್ ಹಾಕುವ ಮೂಲಕ ಕಾರ್ಡ್ ಚಳವಳಿಗೆ ಚಾಲನೆ ನೀಡಿದರು. ಸಂಘದ ಗೌರವ ಅಧ್ಯಕ್ಷ ಯು. ಲೋಕೇಶ್ ಹೆಗ್ಡೆ, ಅಧ್ಯಕ್ಷ ಅಬ್ದುಲ್ ಜಲೀಲ್, ಕಾರ್ಯದರ್ಶಿ ಸೇಸಪ್ಪ ನಾಯ್ಕ, ಮಾಜಿ ಅಧ್ಯಕ್ಷ ಜಯರಾಮ ಕುಲಾಲ್, ಸದಸ್ಯ ಗಿರೀಶ್ ನಾಯ್ಕ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.