ಪುತ್ತೂರು: 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಉದ್ಘಾಟನೆ
ಪುತ್ತೂರು:ಪುತ್ತೂರಿನಲ್ಲಿ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಉದ್ಘಾಟನೆಗೊಳ್ಳುವ ಮೂಲಕ ಈ ಪ್ರದೇಶದ ಬಹುದಿನಗಳ ಬೇಡಿಕೆಯೊಂದು ಈಡೇರಿದಂತಾಗಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕೆ.ಶ್ರೀಧರ್ ರಾವ್ ಹೇಳಿದ್ದಾರೆ.
ಪುತ್ತೂರಿಗೆ ಮಂಜೂರಾಗಿರುವ ನೂತನ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವನ್ನು ಶನಿವಾರ ಬಾರ್ ಎಸೋಸಿಯೇಷನ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆಯುತ್ತಿರುವ ಪುತ್ತೂರಿಗೆ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಬಹಳ ಅಗತ್ಯವಾಗಿದ್ದು, ಹೊಸದಾಗಿ ಮಂಜೂರಾಗಿರುವ ಈ ನ್ಯಾಯಾಲಯವು ಸುತ್ತಮುತ್ತಲಿನ ಜನತೆಗೆ ಉತ್ತಮವಾಗಿ ಬಳಕೆಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಭಕ್ತವತ್ಸಲ, ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎಸ್. ಅಬ್ದುಲ್ ನಝೀರ್, ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ.ವಿ. ಪಿಂಟೋ, ಎಡಿಶನ್ ಅಡ್ವೊಕೇಟ್ ಜನರಲ್ ಕೆ.ಎಂ. ನಟರಾಜ್ ಮಾತನಾಡಿದರು.
ವೇದಿಕೆಯಲ್ಲಿ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಕೃಷ್ಣ ಭಟ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಪುತ್ತೂರು ಬಾರ್ ಎಸೋಸಿಯೇಷನ್ ಅಧ್ಯಕ್ಷ ದೇವಾನಂದ ಕೆ. ಇದ್ದರು.
ಪುತ್ತೂರು ಬಾರ್ ಎಸೋಸಿಯೇಷನ್ ಕಾರ್ಯದರ್ಶಿ ಜಗನ್ನಾಥ ರೈ ವಂದಿಸಿದರು. ಮಹೇಶ್ ಕಜೆ ನಿರೂಪಿಸಿದರು.