ಮಂಗಳೂರು ಕ್ಷೇತ್ರ: ಖಾದರ್ ಖದರ್ ಕ್ಷೀಣ
ಆತ್ಮಭೂಷಣ್
ಮಂಗಳೂರು: ಕಳೆದ ಐದು ವರ್ಷಗಳಲ್ಲಿ ಕೋಟಿಗಟ್ಟಲೆ ಅನುದಾನ ಬಂದಿದೆ, ಕೆಲವೊಂದು ಕಾಮಗಾರಿ ಕಣ್ಣಿಗೆ ಕಾಣುತ್ತಿದ್ದರೂ, ಹೇಳುವಂಥ ಕಾಮಗಾರಿ ಆಗಿಲ್ಲ. ಹಳ್ಳಿಯಲ್ಲಿ ರಸ್ತೆ ಸರಿಯಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಸಾಧನೆ ಸೊನ್ನೆ. ಮೂಲಭೂತ ಅವಶ್ಯಕತೆಯಾದ ನೀರಿನ ಸಮಸ್ಯೆ ಸಮುದ್ರ ಕಿನಾರೆಯಲ್ಲಿರುವ ಉಳ್ಳಾಲ ಪ್ರದೇಶವನ್ನು ಬಿಟ್ಟಿಲ್ಲ.
ಇದು ಮಂಗಳೂರು ವಿಧಾನಸಭಾ ಕ್ಷೇತ್ರ(ಉಳ್ಳಾಲ)ಅಭಿವೃದ್ಧಿಗೆ ಹಿಡಿದ ಕೈಗನ್ನಡಿ. ಇಲ್ಲಿ ಎರಡನೇ ಬಾರಿ ಶಾಸಕರಾದವರು ಯು.ಟಿ.ಖಾದರ್.
ಖಾದರ್ ಅವರ ನಡತೆ ಸರಳ, ಎಲ್ಲರೊಂದಿಗೆ ಬೆರೆಯುತ್ತಾರೆ, ಸಾಧ್ಯವಾದಷ್ಟು ಕೆಲಸವನ್ನೂ ಮಾಡುತ್ತಾರೆ, ಆದರೆ ನಿರೀಕ್ಷಿತ ರೀತಿಯಲ್ಲಿ ಪ್ರಗತಿ ಸಾಧಿಸಲು ವಿಫಲರಾಗಿದ್ದಾರೆ. ಶೇ.60ರಷ್ಟು ಸಾಧನೆ ಅಷ್ಟೇ ಎನ್ನುತ್ತಾರೆ ಸ್ವಪಕ್ಷೀಯರು.
ಗುತ್ತಿಗೆದಾರರ ಹಿಂದೇಟು: 5 ವರ್ಷದ ಶಾಸಕ ಅವಧಿಯಲ್ಲಿ ಕ್ಷೇತ್ರಕ್ಕೆ ಖಾದರ್ ಸುರಿದ ಹಣ ಕೋಟಿಗಳಲ್ಲಿ. ಶಾಸಕ ನಿಧಿ 5 ಕೋಟಿಯಲ್ಲಿ ರಸ್ತೆ ಕಾಂಕ್ರಿಟ್, ಡಾಂಬರೀಕರಣ, ಕುಡಿವ ನೀರು ಯೋಜನೆಗೆ ವಿನಿಯೋಗಿಸಿದ್ದಾರೆ. ಇನ್ನೂ ರು. 40 ಲಕ್ಷ ಸಿಗಲು ಬಾಕಿ ಇದೆ. ಆಡಳಿತಾತ್ಮಕ ಅನುಮೋದನೆ ಪಡೆದು ಕಾಮಗಾರಿ ನಡೆಯುತ್ತಿದೆ.
ಲೋಕೋಪಯೋಗಿ ಇಲಾಖೆಯಡಿ 14 ಕೋಟಿಗಳ ವಿವಿಧ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಈ ಕಾಮಗಾರಿಗೆ ಗುತ್ತಿಗೆದಾರರು ಮುಂದೆ ಬರುತ್ತಿಲ್ಲವಂತೆ. ಯಾಕೆಂದರೆ ಮೂರ್ನಾಲ್ಕು ಕೋಟಿಯಷ್ಟು ಹಳೆ ಬಾಕಿ ಪಾವತಿಯಾಗದ ಕಾರಣ ಗುತ್ತಿಗೆದಾರರು ಹೊಸ ಕಾಮಗಾರಿಗೆ ಹಿಂದೇಟು ಹಾಕುತ್ತಿದ್ದಾರೆ.
ನಬಾರ್ಡ್ನಲ್ಲಿ ವರ್ಷಕ್ಕೆ 1 ಕೋಟಿಯಂತೆ 4 ಕೋಟಿ ಬಿಡುಗಡೆಯಾಗಿದೆ. ಕಳೆದ ವರ್ಷದ ಕೆಲಸ ಈಗಷ್ಟೆ ನಡೆಯುತ್ತಿದೆ. ಈ ವರ್ಷದ 1 ಕೋಟಿ ಬಿಡುಗಡೆಯಾಗಿಲ್ಲ. ಹಳ್ಳಿ ಪ್ರದೇಶದಲ್ಲಿ 4 ಸೇತುವೆ ರಚನೆಯಾಗಿದೆ. ಹಳ್ಳಿ ಸಂಪರ್ಕ ರಸ್ತೆಗಳೂ ಇದೇ ಅನುದಾನದಲ್ಲಿ ಆಗಿದೆ.
ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಇದುವರೆಗೆ ಬಂದ ಮೊತ್ತ 1.50 ಕೋಟಿ. ರಸ್ತೆ ಕಾಮಗಾರಿಗೆ ಪ್ರತಿ ಗ್ರಾಮಕ್ಕೆ ಇದನ್ನು ಹಂಚಿದ್ದಾರೆ.
ನಮ್ಮ ಗ್ರಾಮ, ನಮ್ಮ ರಸ್ತೆಗೆ ಅಡ್ಡಿ: 'ನಮ್ಮ ಗ್ರಾಮ, ನಮ್ಮ ರಸ್ತೆ' ಯೋಜನೆಯಲ್ಲಿ 50ಕಿ.ಮೀ ರಸ್ತೆ ಕಾಮಗಾರಿಗೆ 22 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ 20 ಕಿ.ಮೀ ರಸ್ತೆಯಾಗಿದೆ. ಈ ಯೋಜನೆಯಲ್ಲಿ ರಸ್ತೆ ರಚನೆಗೆ ಇಕ್ಕೆಲಗಳಲ್ಲಿ 8 ಮೀಟರ್ ಜಾಗ ಬಿಡಬೇಕು. ಈ ನಿಬಂಧನೆ ಗೊತ್ತಾದ ಬಳಿಕ ಮಂಜೂರಾದ ಕಾಮಗಾರಿ ಸ್ಥಳಗಳಲ್ಲಿ ರಸ್ತೆಗೆ ಜಾಗ ಬಿಡದಿದ್ದರೆ ಕಾಮಗಾರಿ ಸಾಧ್ಯವಾಗುತ್ತಿಲ್ಲ. ತಕ್ಷಣವೇ ಬೇರೆಡೆಗೆ ಕಾಮಗಾರಿ ಸ್ಥಳಾಂತರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಯಾರು ರಸ್ತೆಗೆ ಜಾಗ ಬಿಡಲು ಒಪ್ಪಿಗೆ ಸೂಚಿಸುತ್ತಾರೋ ಅಂಥ ಕಡೆಗಳಿಗೆ ರಸ್ತೆ ಕಾಮಗಾರಿ ನಡೆಯುತ್ತ್ತಿದೆ. ಇನ್ನು 15 ಕೋಟಿ ಬಿಡುಗಡೆಗೆ ಬಾಕಿ ಇದೆ.
ಕೇಂದ್ರ ರಸ್ತೆ ನಿಧಿಯಲ್ಲಿ 2 ಕೋಟಿ, ಪ್ರಧಾನಿ ಗ್ರಾಮ ಸಡಕ್ ಯೋಜನೆಯಲ್ಲಿ ತಲಾ 2 ಕೋಟಿ ದಕ್ಕಿದೆ. ಸಣ್ಣ ನೀರಾವರಿ ಯೋಜನೆಯಲ್ಲಿ 6 ಕೋಟಿಗಳಲ್ಲಿ 12 ಕಿಂಡಿಅಣೆಕಟ್ಟು ನಿರ್ಮಿಸಲಾಗಿದೆ. ಅಂತರ್ಜಲ ವೃದ್ಧಿಗೆ ಇದು ಸಹಕಾರಿಯಾಗಿದೆ ಎನ್ನುವುದು ಜನತೆಯ ಸಮಾಧಾನ.
ಬಹುಗ್ರಾಮ ಯೋಜನೆ ಬಾಕಿ: 30-50ರ ಸ್ಕೀಮ್ನಲ್ಲಿ 3.50 ಕೋಟಿ ಮಂಜೂರಾಗಿದ್ದು, ಮುಖ್ಯಮಂತ್ರಿ ವಿಶೇಷ ಅನುದಾನ ಕಳೆದ ವರ್ಷ 1.50 ಕೋಟಿ ಸಿಕ್ಕಿದೆ. ಈ ವರ್ಷ ಇನ್ನಷ್ಟೆ ಗೊತ್ತಾಗಬೇಕು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ 52 ಕೋಟಿಯಲ್ಲಿ ಅನುಷ್ಠಾನಗೊಳ್ಳಲಿದೆ.
ಮುಡಿಪಿನ 5 ಹಾಗೂ ಕೋಟೆಕಾರಿನ 12 ಗ್ರಾಮ ಪಂಚಾಯ್ತಿಗಳಲ್ಲಿ ಇದು ಕಾರ್ಯರೂಪಕ್ಕೆ ಬರಬೇಕು. ಕಡಲ್ಕೊರೆತ ತಡೆಗೆ ಎಡಿಬಿಯ 22 ಕೋಟಿಗಳ ಟೆಂಡರ್ ಆಗಿದ್ದರೂ, ಉಳ್ಳಾಲ ಸಮುದ್ರದಲ್ಲಿ ಕಾಮಗಾರಿ ಶುರುವಾಗಿಲ್ಲ. ಆದರೂ ಮುಖ್ಯಮಂತ್ರಿ ವೈದ್ಯಕೀಯ ನಿಧಿ ಮತ್ತು ವಿಧಾನಸಭೆಯಲ್ಲಿ ಅತೀ ಹೆಚ್ಚು ಪ್ರಶ್ನೆ ಕೇಳಿದ ಹೆಗ್ಗಳಿಕೆ ಇರುವುದು ಯು.ಟಿ.ಖಾದರ್ ಹೆಸರಲ್ಲಿ ಎಂಬುದು ಗಮನಾರ್ಹ.
ಶಾಶ್ವತ ಯೋಜನೆ ಇಲ್ಲ: ಉಳ್ಳಾಲ ಪುರಸಭೆಯಲ್ಲಿ ಒಳಚರಂಡಿ ಕಾಮಗಾರಿ ಅಸಮರ್ಪಕ ವಿರುದ್ಧ ಇತ್ತೀಚೆಗೆ ಅರ್ಧ ದಿನ ಬಂದ್ ನಡೆದಿತ್ತು.
ಇಷ್ಟು ವರ್ಷಗಳಲ್ಲಿ ಕ್ಷೇತ್ರದಲ್ಲಿ ಯಾವುದೇ ಶಾಶ್ವತ ಯೋಜನೆ ಜಾರಿಗೆ ಬಂದಿಲ್ಲ. ಹಲವು ಶಿಕ್ಷಣ ಸಂಸ್ಥೆಗಳಿರುವ ಈ ಕ್ಷೇತ್ರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೂಡ ಇಲ್ಲ.