ಮುಷ್ಕರಕ್ಕೆ ಜಿಲ್ಲಾ ಸರ್ಕಾರಿ ನೌಕರರ ಬೆಂಬಲವಿಲ್ಲ
ಮಂಗಳೂರು: ಸರ್ಕಾರದಿಂದ ಯಾವುದೇ ಮಾನ್ಯತೆ ಪಡೆಯದ ಸರ್ಕಾರಿ ನೌಕರರ ಸಂಘವು ಫೆ. 20 ಮತ್ತು 21 ರಂದು ನಡೆಸುವ ಮುಷ್ಕರಕ್ಕೆ ದ.ಕ. ಜಿಲ್ಲಾ ಸರ್ಕಾರಿ ನೌಕರರ ಸಂಘವು ಭಾಗವಹಿಸುತ್ತಿಲ್ಲ ಎಂದು ಹೇಳಿದೆ.
ಸರ್ಕಾರದ ಮಲತಾಯಿ ಧೋರಣೆ ಹಾಗೂ ತಾರತಮ್ಯ ವಿರುದ್ಧ ಕಾನೂನು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಜಿಲ್ಲಾ ಸರ್ಕಾರಿ ನೌಕರರ ಸಂಘ ಸಮಿತಿ ರಚನೆ ಮಾಡಿದ್ದು, ಶೀಘ್ರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ಜಿ. ಪಿಂಟೋ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸರ್ಕಾರಿ ನೌಕರರ ಬಾಡಿಗೆ ಮನೆ ಭತ್ಯೆ ಮಂಜೂರಲ್ಲಿ ಸರ್ಕಾರ ಬೆಂಗಳೂರು ಮತ್ತು ನಗರದ ಇತರ ಭಾಗದಲ್ಲಿ ವಾಸಿಸುವ ನೌಕರರಿಗೆ ವಿಭಿನ್ನ ರೀತಿಯಲ್ಲಿ ನೀತಿ ಅನುಷ್ಠಾನಗೊಳಿಸಿ ಮೋಸ ಮಾಡಿದೆ. ಬೆಂಗಳೂರು ನಗರ ಪ್ರದೇಶದ ಸರ್ಕಾರಿ ನೌಕರರಿಗೆ 2007ರ ಅಧಿಸೂಚನೆಯಂತೆ ಬಾಡಿಗೆ ಮನೆ ಭತ್ಯೆಯಲ್ಲಿ ಶೇ. 30 ಮಂಜೂರು ನೀಡಿದ್ದು, ರಾಜ್ಯದ ಇತರ ನಗರದಲ್ಲಿ ವಾಸಿಸುವ ನೌಕರರಿಗೆ ಮಾತ್ರ 2001ರ ಅಧಿಸೂಚನೆಯಂತೆ ಶೇ 25 ಮಂಜೂರಾತಿ ನೀಡಿ ಅನ್ಯಾಯವೆಸಗಿದೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಪ್ರಕಾಶ್ ನಾಯಕ್, ಕೋಶಾಧಿಕಾರಿ ಗೋಪಾಲಕೃಷ್ಣ ಮತ್ತಿತ್ತರರು ಇದ್ದರು.