ಯುವಕರಿಬ್ಬರ ಪ್ರಾಣ ತೆಗೆದ ವೈದ್ಯರ ಕುಡಿತದ ಚಾಲನೆ
ಮಂಗಳೂರು: ಪ್ರಾಣ ಉಳಿಸಬೇಕಾದ ವೈದ್ಯರಿಬ್ಬರು ಕುಡಿತದ ಅಮಲಿನಲ್ಲಿ ಕಾರು ಚಲಾಯಿಸಿದ ಪರಿಣಾಮ ರಸ್ತೆ ಬದಿ ನಿಂತಿದ್ದ ಇಬ್ಬರು ಯುವಕರು ದುರಂತ ಅಂತ್ಯ ಕಂಡ ಘಟನೆ ಭಾನುವಾರ ಮುಂಜಾನೆ ಯೆಯ್ಯಾಡಿ ಬಳಿ ಸಂಭವಿಸಿದೆ.
ಮೃತಪಟ್ಟವರನ್ನು ಮೂಡುಶೆಡ್ಡೆ ಚಂದ್ರಹಾಸರ ಪುತ್ರ ಯೋಗೀಶ್(27) ಹಾಗೂ ಕಲ್ಲಡ್ಕ ವೀರಕಂಭ ಸೋಮಪ್ಪ ನಾಯಕ್ ಪುತ್ರ ಜಯಪ್ರಕಾಶ್ (23) ಎಂದು ಗುರುತಿಸಲಾಗಿದೆ.
ತಡರಾತ್ರಿ ಯೆಯ್ಯಾಡಿ ಪೆಟ್ರೋಲ್ ಬಂಕ್ ಬಳಿ ಈ ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದ ಯುವಕರಿಬ್ಬರು ವೃತ್ತಿಯಲ್ಲಿ ವೈದ್ಯರಾಗಿದ್ದು, ಓರ್ವ ಯುವತಿಯೂ ಇದ್ದಳು ಎನ್ನಲಾಗಿದೆ. ವಿಪರೀತ ಅಮಲು ಪದಾರ್ಥ ಸೇವಿಸಿದ್ದ ಇವರು ತಮ್ಮ ಶೆವರ್ಲೆ ಕಾರನ್ನು ಅತಿವೇಗ, ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿ ನಿಂತಿದ್ದ ಯುವಕರಿಬ್ಬರಿಗೆ ಡಿಕ್ಕಿ ಹೊಡೆದಿತ್ತು.
ಘಟನೆಯಲ್ಲಿ ಯೋಗೀಶ್, ಜಯಪ್ರಕಾಶ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿಸಿದರೂ ತೀವ್ರ ರಕ್ತಸ್ರಾವದಿಂದ ಸಾವಿಗೀಡಾದರು.
ಸುರತ್ಕಲ್ನಲ್ಲಿ ಎಲೆಕ್ಟ್ರಿಷನ್ ಕೆಲಸ ಮುಗಿಸಿ ವಾಪಾಸಾಗುತ್ತಿದ್ದಾಗ ಯೋಗೀಶ್ಗೆ ಡ್ರಾಪ್ ಕೊಡಲೆಂದು ಜಯಪ್ರಕಾಶ್ ಬಂದಿದ್ದಾಗ ಈ ಅವಘಡ ಸಂಭವಿಸಿತ್ತು. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.