ವಿವಿಗೆ ಟಿಪ್ಪು ಬದಲು ಕಿಟೆಲ್ ಹೆಸರಿಗೆ ಒತ್ತಾಯ
ಮಂಗಳೂರು: ಮೈಸೂರಿನ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲುದ್ದೇಶಿಸಿದ ಅಲ್ಪಸಂಖ್ಯಾತ ವಿಶ್ವವಿದ್ಯಾಲಯಕ್ಕೆ ಕನ್ನಡ ನಿಘಂಟು ಜನಕ ರೆ.ಡಾ. ಫರ್ಡಿನಾಂಡ್ ಕಿಟೆಲ್ ಹೆಸರಿಸುವಂತೆ ಸಾಮಾಜಿಕ ಹೋರಾಟಗಾರ ಟಿ.ಜಿ.ಅಬ್ರಹಾಂ ಮತ್ತು ಅಖಿಲ ಕರ್ನಾಟಕ ಕ್ರೈಸ್ತರ ಕನ್ನಡ ಸಂಘ ಪ್ರಧಾನ ಕಾರ್ಯದರ್ಶಿ ಫಾಯಲ್ ರಾಜ್ ಶುಕ್ರವಾರ ಜತೆಯಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕ್ರೈಸ್ತರ ಪರವಾಗಿ ಕಿಟೆಲ್ ಹೆಸರಿಡುವಂತೆ ಕೋರುತ್ತೇವೆ. ಇದರ ಹಿಂದೆ ಮುಸ್ಲಿಂ ವಿರೋಧಿ ಭಾವನೆ ಇಲ್ಲ, ಉದ್ದೇಶಿತ ವಿವಿಗೆ ಟಿಪ್ಪು ಸುಲ್ತಾನ್ ಹೆಸರಿನ ಬದಲು ಸಂತ ಶಿಶುನಾಳ ಶರೀಫ್ ಅಥವಾ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಹೆಸರು ಪ್ರಸ್ತಾಪಿಸಿದರೆ ಅದನ್ನು ಸಂತೋಷದಿಂದ ಸ್ವಾಗತಿಸುವುದಾಗಿ ಹೇಳಿದರು.
ವಿವಿಗೆ ಟಿಪ್ಪು ಹೆಸರಿಡುವಲ್ಲಿ ರಾಜಕೀಯ ದುರುದ್ದೇಶವಿದೆ ಎಂದ ಅವರು, ಟಿಪ್ಪು ಕನ್ನಡ ಭಾಷೆಗೆ ಆದ್ಯತೆ ನೀಡದೆ ಪರ್ಷಿನ್ ಭಾಷೆಗೆ ಒತ್ತು ನೀಡಿದ್ದಾನೆ. ಕಾರವಾರ, ಮೈಸೂರು, ಮಂಗಳೂರುಗಳಲ್ಲಿ ಕ್ರೈಸ್ತರನ್ನು ಬಲವಂತವಾಗಿ ಶ್ರೀರಂಗಪಟ್ಟಣಕ್ಕೆ ತಂದು ಇಸ್ಲಾಂಗೆ ಮತಾಂತರಿಸಿದ್ದಾನೆ. ಈ ಸತ್ಯವನ್ನು ಟಿಪ್ಪು ಮಗನಾದ ಗುಲಾಂ ಮಹಮ್ಮದ್ ತನ್ನ ಪುಸ್ತಕದಲ್ಲಿ ಬಹಿರಂಗವಾಗಿ ಸ್ಪಷ್ಟೀಕರಿಸಿದ್ದಾನೆ. ಇತಿಹಾಸಕಾರ ಕೆ.ಸಿ.ಎನ್. ರಾಜನ್ ಬರೆದ ಇತಿಹಾಸ ಪುಸ್ತಕದಲ್ಲಿ ಇದರ ಉಲ್ಲೇಖವಿದೆ ಎಂದರು.
ವಿವಿಗೆ ಕಿಟೆಲ್ ಹೆಸರಿಡುವ ಕುರಿತಂತೆ ನಾಡಿನ ಎಲ್ಲ ಚರ್ಚ್ಗಳ ಧರ್ಮಗುರುಗಳನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತಿದ್ದು, ಈ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.