ವೈದ್ಯರ ಕುಡಿತದ ಚಾಲನೆಗೆ ಇಬ್ಬರು ಬಲಿ
ಮಂಗಳೂರು: ಪ್ರಾಣ ಉಳಿಸಬೇಕಾದ ವೈದ್ಯರಿಬ್ಬರು ಕುಡಿತದ ಅಮಲಿನಲ್ಲಿ ಕಾರು ಚಲಾಯಿಸಿದ ಪರಿಣಾಮ ರಸ್ತೆ ಬದಿ ನಿಂತಿದ್ದ ಇಬ್ಬರು ಯುವಕರು ದುರಂತ ಅಂತ್ಯ ಕಂಡ ಘಟನೆ ಶನಿವಾರ ತಡರಾತ್ರಿ ಇಲ್ಲಿನ ಯೆಯ್ಯಾಡಿ ಬಳಿ ಸಂಭವಿಸಿದೆ.
ಮೂಡುಶೆಡ್ಡೆ ಚಂದ್ರಹಾಸರ ಪುತ್ರ ಯೋಗೀಶ್ (27) ಹಾಗೂ ಕಲ್ಲಡ್ಕ ವೀರಕಂಭ ಸೋಮಪ್ಪ ನಾಯಕ್ ಪುತ್ರ ಜಯಪ್ರಕಾಶ್ (23) ಮೃತಪಟ್ಟವರು.
ಕಾರಿನಲ್ಲಿದ್ದ ಯುವಕರಿಬ್ಬರು ವೃತ್ತಿಯಲ್ಲಿ ವೈದ್ಯರಾಗಿದ್ದು, ಒಬ್ಬ ಯುವತಿಯೂ ಜೊತೆಗಿದ್ದಳು ಎನ್ನಲಾಗಿದೆ. ವಿಪರೀತ ಅಮಲು ಪದಾರ್ಥ ಸೇವಿಸಿದ್ದ ಇವರು ತಮ್ಮ ಶೆವರ್ಲೆ ಕಾರನ್ನು ಅತಿವೇಗ, ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿ ನಿಂತಿದ್ದ ಯುವಕರಿಬ್ಬರಿಗೆ ಡಿಕ್ಕಿ ಹೊಡೆದಿದ್ದಾರೆ.
ಘಟನೆಯಲ್ಲಿ ಯೋಗೀಶ್, ಜಯಪ್ರಕಾಶ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿಸಿದರೂ ತೀವ್ರ ರಕ್ತಸ್ರಾವದಿಂದ ಸಾವಿಗೀಡಾದರು. ಸುರತ್ಕಲ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಯೋಗೀಶ್ ಕೆಲಸ ಮುಗಿಸಿ ವಾಪಾಸಾಗುತ್ತಿದ್ದು, ಅವರಿಗೆ ಡ್ರಾಪ್ ಕೊಡಲು ಜಯಪ್ರಕಾಶ್ ಬಂದಿದ್ದರು. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.