ಹಸಿರು ಕವಚ ಯೋಜನೆಗೆ 10 ಸಾವಿರ ಕೋಟಿ: ಆಶೀಸರ
ಸುಳ್ಯ: ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಿಗೆ ವಿಶೇಷವಾಗಿ ಹಸಿರು ಕವಚ ಯೋಜನೆಗಾಗಿ 10 ಸಾವಿರ ಕೋಟಿಯನ್ನು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಗ್ರಾಮ ಅರಣ್ಯ ಸಮಿತಿಗಳನ್ನು, ಇಕೋ ಕ್ಲಬ್‌ಗಳನ್ನು ಬಲಪಡಿಸುವ ಯೋಜನೆ ಇದೆ. ಇದರ ಜತೆಗೆ ಅರಣ್ಯದಂತಹ ಜೀವ ವೈವಿಧ್ಯತೆಯ ರಕ್ಷಣೆ, ನೀರನ್ನು ಉಳಿಸಲು ಮತ್ತು ಔಷಧೀಯ ಗಿಡ ಮೂಲಿಕೆಗಳನ್ನು ಬೆಳೆಯುವಂತಹ ಯೋಜನೆಗಳಿಗೆ 1000 ಕೋಟಿಗಳನ್ನು ಸರ್ಕಾರ ಮೀಸಲಿಟ್ಟಿದೆ ಎಂದು ಪಶ್ಚಿಮಘಟ್ಟ ಕಾರ್ಯ ಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ನುಡಿದರು.
ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಶುಕ್ರವಾರ ಪಶ್ಚಿಮಘಟ್ಟ ಕಾರ್ಯಪಡೆ ಮತ್ತು ಅರಣ್ಯ ಇಲಾಖೆ ಮಂಗಳೂರು ವಿಭಾಗ ಇತರ ವತಿಯಿಂದ ನಡೆದ ಹಸಿರು ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪಶ್ಚಿಮ ಘಟ್ಟ ಅರಣ್ಯದಲ್ಲಿ ಹೇರಳವಾದ ಔಷಧೀಯ ಗಿಡಮೂಲಿಕೆಗಳಿದ್ದು ಅದು ಮಲೆನಾಡಿನಲ್ಲಿ ಮಾತ್ರ ಇರುವ ಆಸ್ತಿಯಾಗಿದೆ. ಇವುಗಳನ್ನು ಉಳಿಸಿ ಬೆಳೆಸುವಲ್ಲಿ ಜನರ ಸಹಭಾಗಿತ್ವ ಅಗತ್ಯ ಎಂದು ಅವರು ಹೇಳಿದರು.
ಸಭಾಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ ವಹಿಸಿದ್ದರು. ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಶಾಂತಪ್ಪ, ಅರಣ್ಯ ಸಂರಕ್ಷಣಾಧಿಕಾರಿ ಪದ್ಮನಾಭ ಗೌಡ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸದಾಶಿವ ಮಾತನಾಡಿದರು. ಸಭೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಶ್ಚಿಮಘಟ್ಟ ಕಾರ್ಯ ಪಡೆಯ ಸದಸ್ಯ ಡಾ. ಕೇಶವ ಎಚ್, ಆಯುರ್ವೇದ ತಜ್ಞ ಡಾ. ಸತ್ಯನಾರಾಯಣ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ಎ.ಸಿ.ಎಫ್. ದಿನೇಶ್ ಕುಮಾರ್ ಸ್ವಾಗತಿಸಿ, ರೇಂಜರ್ ಸುಂದರ್ ಶೆಟ್ಟಿ ವಂದಿಸಿದರು. ನಳಿನಿ ನಿರೂಪಿಸಿದರು.