ಅಕ್ಷರ ದಾಸೋಹಕ್ಕೆ ಅಕ್ಷಯ ಬುಟ್ಟಿ
ಆತ್ಮಭೂಷಣ್
ಮಂಗಳೂರು: ಪೇಟೆಯಿಂದ ಅಥವಾ ಶಾಲಾ ತೋಟದಲ್ಲಿ ಬೆಳೆದ ತರಕಾರಿಯನ್ನು ಅಕ್ಷರ ದಾಸೋಹಕ್ಕೆ ಬಳಸುವುದು ಸಾಮಾನ್ಯ. ಆದರೆ ಜಿಲ್ಲೆಯ ಶಾಲಾ ಮಕ್ಕಳು ತಮ್ಮದೇ ಮನೆಯಂಗಳದಲ್ಲಿ ಬೆಳೆದ ತರಕಾರಿಯನ್ನು ಶಾಲೆಗೆ ತರುತ್ತಾರೆ, ಶಾಲೆಯಲ್ಲಿ ಸಿದ್ಧವಿರುವ 'ಅಕ್ಷಯ ಬುಟ್ಟಿ'ಗೆ ಒಟ್ಟಿಗೆ ಹಾಕುತ್ತಾರೆ. ಅದರಿಂದಲೇ ಬಿಸಿಯೂಟಕ್ಕೆ ಹೆಚ್ಚುವರಿ ಸಾಂಬಾರ್ ಸಿದ್ಧವಾಗುತ್ತದೆ.
ಈಗ ಬಿಸಿಯೂಟ ಕಾರ್ಯಕ್ರಮದಲ್ಲಿ ಮಕ್ಕಳ ಹೆತ್ತವರೂ ತೊಡಗಿಸಿಕೊಳ್ಳಬೇಕು ಎಂಬ ನಿರ್ದೇಶನ ಇರುವುದರಿಂದ ಆಗಾಗ ಹೆತ್ತವರೂ ಶಾಲೆಗೆ ಆಗಮಿಸುತ್ತಾರೆ. ತಮ್ಮ ಮಗುವಿನ ಶೈಕ್ಷಣಿಕ ಪ್ರಗತಿ ಜತೆಗೆ ಬಿಸಿಯೂಟವನ್ನು ಪರಿಶೀಲಿಸುತ್ತಾರೆ. ಹೀಗೆ ಬರುವವರಿಗೆ ಹೆಚ್ಚುವರಿ ತಯಾರಿಸಿದ ಬಿಸಿಯೂಟ ನೀಡುತ್ತಾರೆ.
ಏನಿದು 'ಅಕ್ಷಯ ಬುಟ್ಟಿ'?: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಇದೆ. ಪ್ರತಿ ವಿದ್ಯಾರ್ಥಿಗೆ ಸರ್ಕಾರ ನಿಗದಿಪಡಿಸಿದ ಮೊತ್ತದಲ್ಲಿ ಬಿಸಿಯೂಟ ತಯಾರಿಸಬೇಕಾಗಿರುವುದರಿಂದ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ರುಚಿಗೆ ಅವಕಾಶ ಇರುವುದಿಲ್ಲ.
ಈ ಹಿನ್ನಲೆಯಲ್ಲಿ ಜಾರಿಗೆ ಬಂದದ್ದು 'ಅಕ್ಷಯ ಬುಟ್ಟಿ' ಕಲ್ಪನೆ. ಜಿಲ್ಲೆಯಲ್ಲಿ ಈ ವರ್ಷ ಜಾರಿಗೆ ಬಂದಿರುವ 'ಅಕ್ಷಯ ಬುಟ್ಟಿ'ಗೆ ತರಹೇವಾರಿ ತರಕಾರಿ ಸೇರುತ್ತದೆ. ಮನೆಯಲ್ಲಿ ಕೃಷಿ ತೋಟ ಹೊಂದಿರುವ ಪ್ರತಿ ತರಗತಿಯ ವಿದ್ಯಾರ್ಥಿ ತರಕಾರಿ ತರುತ್ತಾನೆ. ಇದೇನು ಕಡ್ಡಾಯವಲ್ಲ, ಪೇಟೆಯಿಂದ ತರಕಾರಿ ಖರೀದಿಸಿ ತರುವುದಕ್ಕೆ ಮಾತ್ರ ನಿರ್ಬಂಧ.
ಹೀಗೆ ಮನೆಯಲ್ಲಿ ಬೆಳೆಸಿದ ಯಾವುದಾದರೂ ಒಂದು ತರಕಾರಿಯನ್ನು ಶಾಲೆಗೆ ತರಬೇಕು. ಹೆಚ್ಚು ಸಲ ತರಕಾರಿ ತಂದವರಿಗೆ ಕೆಲವು ಶಾಲೆಗಳು ಬಹುಮಾನ ನೀಡುತ್ತವೆ. ಶಾಲೆಗೆ ತಂದ ತರಕಾರಿಯನ್ನು ಒಂದೇ ಬುಟ್ಟಿಗೆ ಹಾಕುತ್ತಾರೆ. ಅದನ್ನು ಆಯ್ದು ಬಿಸಿಯೂಟಕ್ಕೆ ಬಳಸುತ್ತಾರೆ.
ಶಾಲೆಗೆ ಬಂತು ಹಳ್ಳಿ ತರಕಾರಿ: ಸಾಮಾನ್ಯವಾಗಿ ಮನೆಯಲ್ಲಿ ಬೆಳೆಸುವ ಕುಂಬಳಕಾಯಿ, ತೆಂಗಿನಕಾಯಿ, ಆಲಸಂಡೆ, ಸುವರ್ಣಗಡ್ಡೆ, ಸೌತೆಕಾಯಿ, ಹೀರೆಕಾಯಿ, ಚೀನಿಕಾಯಿ, ಬದನೆಕಾಯಿ, ನುಗ್ಗೆಕಾಯಿ, ಬಸಳೆ ಸೊಪ್ಪು, ಹರಿವೆ ಸೊಪ್ಪು, ವಿಟಮಿನ್ ಸೊಪ್ಪು, ಅನಾನಸ್, ಬಾಳೆಹಣ್ಣು ಹೀಗೆ ನಾನಾ ತರಕಾರಿ ಶಾಲೆಯ ಬುಟ್ಟಿಯಲ್ಲಿ ಕಂಡುಬರುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲೂ ಬಿಸಿಯೂಟದ ಮೆಚ್ಚುಗೆಗೆ ಕಾರಣವಾಗಿದೆ ಎನ್ನುತ್ತಾರೆ ಸರ್ವಶಿಕ್ಷಣ ಅಭಿಯಾನ ಸಂಯೋಜಕ ಶಿವಪ್ರಕಾಶ್.
932 ಶಾಲೆಗಳಲ್ಲಿ ಅನುಷ್ಟಾನ: ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ವೈವಿಧ್ಯಮಯ ತರಕಾರಿಯನ್ನು ಕಾಣಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಜತೆಗೆ ತಮ್ಮಲ್ಲೇ ಬೆಳೆಸಿದ ತರಕಾರಿ ಎಂಬ ಅಭಿಮಾನ ಇರುತ್ತದೆ. ತರಕಾರಿ ಬಗ್ಗೆ ಜಾಗೃತಿ ಪ್ರಜ್ಞೆ ಮೂಡಿಸಲು ನೆರವಾಗುತ್ತದೆ. ಜಿಲ್ಲೆಯ 932 ಪ್ರಾಥಮಿಕ ಶಾಲೆಗಳಲ್ಲಿ 'ಅಕ್ಷಯ ಬುಟ್ಟಿ' ಯೋಜನೆ ಕಾರ್ಯಗತಗೊಂಡಿದೆ ಎನ್ನುತ್ತಾರೆ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಮಂಜುಳಾ.
ಹೆಚ್ಚು ಬಾರಿ ತಂದರೆ ಬಹುಮಾನ: ಮಕ್ಕಳು ಮನೆಯಲ್ಲಿ ಬೆಳೆಸಿದ ತರಕಾರಿಯನ್ನು ಸ್ವಇಚ್ಛೆಯಿಂದ ಶಾಲೆಗೆ ತರುತ್ತಾರೆ. ಒಂದು ತರಗತಿಗೆ ಒಂದು ದಿದಂತೆ ಒಂದರಿಂದ ಎಂಟನೇ ತರಗತಿ ವರೆಗಿನ ವಿದ್ಯಾರ್ಥಿಗಳು ತರಕಾರಿ ತರುತ್ತಾರೆ. ಕಳೆದ ಮೂರು ವರ್ಷದಿಂದ ಪ್ರಾಯೋಗಿಕವಾಗಿ ಇದನ್ನು ಮಾಡುತ್ತಿದ್ದೇವೆ. ಹೆಚ್ಚು ಬಾರಿ ತರಕಾರಿ ತಂದ ವಿದ್ಯಾರ್ಥಿಗಳಿಗೆ ಬಹುಮಾನವನ್ನೂ ನೀಡುತ್ತೇವೆ ಎನ್ನುತ್ತಾರೆ ಓಡಿಲ್ನಾಳ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯಗುರು ದತ್ತಾತ್ರೇಯ.
ಮಾದರಿ ಯೋಜನೆ: ಶಾಲಾ ಮಕ್ಕಳಲ್ಲಿ ಕೃಷಿತೋಟ ಬಗ್ಗೆ ಒಲವು ಮೂಡಿಸುವ ದಿಶೆಯಲ್ಲಿ 'ಅಕ್ಷಯ ಬುಟ್ಟಿ' ಎಂಬ ಹೊಸ ಕಲ್ಪನೆಯನ್ನು ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ. ಇದರಿಂದ ವಿದ್ಯಾರ್ಥಿಗಳು ತರಕಾರಿ ಬಗ್ಗೆ ಮಾಹಿತಿ ಹೊಂದಲು ಸಾಧ್ಯವಿದೆ. ಈ ಹೊಸ ಮಾದರಿ ಯೋಜನೆಯನ್ನು ಇತರೆಡೆ ಅನುಷ್ಟಾನಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್.