ನಾಳೆ ಒಡಿಯೂರು ರಥೋತ್ಸವ
ವಿಟ್ಲ: ಒಡಿಯೂರು ಕ್ಷೇತ್ರದಲ್ಲಿ ದತ್ತಾತ್ರೇಯ ಕ್ಷೇತ್ರದ ಸ್ಥಾಪನೆಯಾಗಿ ರಜತಮಹೋತ್ಸವ 2014ರಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಸುಮಾರು 25 ಕ್ಷೇತ್ರಗಳಲ್ಲಿ 25ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸುವ ಸಂಕಲ್ಪ ಇದೆ ಎಂದು ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
ಸಂಸ್ಥಾನದಲ್ಲಿ ಬುಧವಾರ ನಡೆಯಲಿರುವ ಒಡಿಯೂರು ರಥೋತ್ಸವ ಕುರಿತ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, 20ರಂದು ಎರಡು ಗ್ರಾಮಗಳನ್ನು ಸಂಧಿಸುವ ರಥಯಾತ್ರೆ ನಡೆಯಲಿದೆ ಎಂದರು.
2014ರ ಫೆಬ್ರವರಿಯಲ್ಲಿ ನಡೆಯಲಿರುವ ಮಹೋತ್ಸವಕ್ಕೆ ಸಮಾಜದ ಉನ್ನತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.
ಜನರಲ್ಲಿ ಸಂಸ್ಕೃತಿಯ ಬಗ್ಗೆ ಜಾಗೃತಿ ಹುಟ್ಟಿಸುವ ಸಂಸ್ಕಾರ ಉಳಿಸುವ ಪ್ರಯತ್ನ ಈ ಮೂಲಕ ನಡೆಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ದುಡಿದ ಎಲ್ಲರನ್ನು ಗುರುತಿಸುವ ಕಾರ್ಯ ಈ ಸಂದರ್ಭ ನಡೆಯಲಿದೆ ಎಂದರು.
ಗರ್ಭಗುಡಿ ಶಿಲಾಮಯವಾಗಿ 12 ವರ್ಷಗಳು ಪೂರೈಸಿದೆ. ಈ ಬಗ್ಗೆ ವಿಷೇಶ ಕುಂಭಾಭಿಷೇಕವೂ ನಡೆಯಲಿದೆ. ಮಹಾ ಮಂಟಪದ ಶಿಲಾಮಯವಾಗಿಸುವ ಕಾರ್ಯ ನಡೆ ಸಂಕಲ್ಪ ಸಂಸ್ಥಾನಕ್ಕಿದೆ.
ತುಳು ಸಂಸ್ಕೃತಿ ರಥಯಾತ್ರೆ: ತುಳು ನಾಡಿನ ಸಂಸ್ಕೃತಿ ನೆನಪಿಸಿ ಉಳಿಸುವ ನಿಟ್ಟಿನಲ್ಲಿ ನಾಡಿನ ಮೂರು ಕಡೆಗಳಿಂದ ಪ್ರತ್ಯೇಕ ತುಳು ಸಂಸ್ಕೃತಿ ರಥಗಳು ಹೊರಟು ಮಂಗಳೂರಿನಲ್ಲಿ ಸಂಧಿಸುವ ಕಾರ್ಯಕ್ರಮ ಹಾಕುವ ಯೋಜನೆಯಿದ್ದು ಇದಕ್ಕೆ ತುಳು ಅಕಾಡಮಿ ಸಹಕಾರವೂ ಸಿಗಲಿದೆ ಎಂದು ಹೇಳಿದರು.
ರಥೋತ್ಸವ ಸ್ವಾಗತ ಸಮಿತಿಯ ಟಿ. ತಾರನಾಥ ಕೊಟ್ಟಾರಿ ಮಾತನಾಡಿ, ರಥೋತ್ಸವದಂದು ಬೆಳಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಬೆಳಗ್ಗೆ ಧಾರ್ಮಿಕ ಸಭೆಯಲ್ಲಿ ರಜತ ಮಹೋತ್ಸವಕ್ಕೆ ಚಾಲನೆ ನಡೆದು ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂಜೆ ವಿ.ಬಿ.ಹಿರಣ್ಯ ನೇತೃತ್ವದಲ್ಲಿ ಯಕ್ಷಗಾನ ಬಯಲಾಟ, ರಾತ್ರಿ ರಥಯಾತ್ರೆ ನಡೆಯಲಿದೆ. ರಥ ಸಾಗುವ ವಿವಿಧ ಕಡೆಗಳಲ್ಲಿ ಪೂಜಾ ವಿಧಿವಿಧಾನಗಳು ನಡೆಯಲಿವೆ ಎಂದರು. ಕಾರ್ಯನಿರ್ವಾಹಕ ಜಗನ್ನಾಥ ರೈ, ಗುರುದೇವ ಸೇವಾ ಬಳಗಗಳ ಒಡಿಯೂರು ಅಧ್ಯಕ್ಷ ಎ. ಅಶೋಕ್ ಕುಮಾರ್, ಮಂಗಳೂರು ಅಧ್ಯಕ್ಷ ಜಯಂತ್ ಜೆ. ಕೋಟ್ಯಾನ್, ಉಪಾಧ್ಯಕ್ಷ ವೇಣುಗೋಪಾಲ ಮಾರ್ಲ, ಮುಂಬೈ ಅಧ್ಯಕ್ಷ ಪ್ರಕಾಶ್ ಎಲ್. ಶೆಟ್ಟಿ, ವಾಮಯ ಶೆಟ್ಟಿ ಮುಂಬೈ, ಪ್ರಚಾರ ಸಮಿತಿಯ ಎಚ್.ಕೆ. ಪುರುಷೋತ್ತಮ ಹಾಜರಿದ್ದರು.