ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ 'ದಕ್ಷಿಣೆ'!
ಆತ್ಮಭೂಷಣ್
ಮಂಗಳೂರು: ಪಶ್ಚಿಮ ವಾಹಿನಿ ಯೋಜನೆಯಲ್ಲಿ ಕಿಂಡಿ ಅಣೆಕಟ್ಟು ಮತ್ತು ಉಪ್ಪು ನೀರು ತಡೆಗೋಡೆ ರಚನೆಗೆ 420 ಕೋಟಿ, ಓಷನೇರಿಯಂಗೆ 200 ಕೋಟಿ, ಮಹಾನಗರ ಪಾಲಿಕೆಗೆ ವಿಶೇಷ ಅನುದಾನ 200 ಕೋಟಿ, 2 ಜೆಟ್ಟಿ ನಿರ್ಮಾಣಕ್ಕೆ 58 ಕೋಟಿ, ಮಿನಿ ವಿಧಾನಸೌಧಕ್ಕೆ 40 ಕೋಟಿ, ಬಹುಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ 39 ಕೋಟಿ, ಕೋರ್ಟ್ ಕಟ್ಟಡ 30 ಕೋಟಿ, ಪ್ಲಾನಿಟೋರಿಯಂಗೆ 25 ಕೋಟಿ, ಎಂಆರ್‌ಪಿಎಲ್ ಸಹಯೋಗದಲ್ಲಿ ಲೇಡಿಗೋಷನ್ ಆಸ್ಪತ್ರೆಗೆ ಹೊಸ ಕಟ್ಟಡಕ್ಕೆ 21.70 ಕೋಟಿ, ಆರ್‌ಎಪಿಸಿ ಕೇಂದ್ರಕ್ಕೆ 12 ಕೋಟಿ, ವಕೀಲರ ಭವನಕ್ಕೆ 10 ಕೋಟಿ, ಅಗ್ನಿಶಾಮಕ ಕಟ್ಟಡ 3 ಕೋಟಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ 3 ಕೋಟಿ...
ಇದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಕಳೆದ 5 ವರ್ಷದಲ್ಲಿ ಹರಿದುಬಂದ ಅನುದಾನದ ವಿವರ. ಸದಾ ದಾಖಲೆ ಇಟ್ಟೇ ಮಾತನಾಡುವ ವಿಧಾನಸಭಾ ಉಪಸಭಾಪತಿಯೂ ಆಗಿರುವ ಯೋಗೀಶ್ ಭಟ್ ಹರಿದುಬಂದ ಅನದಾನದ ಬಗ್ಗೂ ದಾಖಲೆ ನೀಡಿದ್ದಾರೆ. ಆದರೆ ಎಷ್ಟು ಮೊತ್ತ ವಿನಿಯೋಗ ಆಗಿದೆ ಎಂದು ಪ್ರಶ್ನಿಸಿದರೆ, ಲೆಕ್ಕ ಇಟ್ಟಿಲ್ಲ, ಇನ್ನಷ್ಟೆ ಲೆಕ್ಕ ಹಾಕುತ್ತಿದ್ದೇನೆ ಎನ್ನುತ್ತಾರೆ. ಹಾಗಾಗಿ ಇವರಲ್ಲಿ ಸಿದ್ಧಪಡಿಸಿದ ವಿವರಗಳಿಲ್ಲ.
5 ಕೋಟಿ ಶಾಸಕರ ಅನುದಾನ, ಮಲೆನಾಡು ಪ್ರದೇಶಾಭಿವೃದ್ಧಿ, ಸಣ್ಣ ನೀರಾವರಿ, ಲೋಕೋಪಯೋಗಿ, ನಬಾರ್ಡ್ ಹೀಗೆ ಶಾಸಕರಿಗೆ ಯಾವುದೆಲ್ಲ ಅನುದಾನ ಬರುತ್ತದೋ ಅದನ್ನೆಲ್ಲ ಮಂಗಳೂರು ಅಭಿವೃದ್ಧಿಗೆ ಸುರಿದಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ದಾನಿಗಳಿಂದ ಆರ್ಥಿಕ ಸಹಾಯ ದೊರಕಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ.
ವೆಂಟೆಡ್ ಡ್ಯಾಂಗೆ ಹಣ ಸಿಕ್ಕಿಲ್ಲ: ಮಂಗಳೂರು ನೀರು ಸರಬರಾಜಿಗೆ ತುಂಬೆಯಲ್ಲಿ ಸಿದ್ಧಗೊಳ್ಳುತ್ತಿರುವ ವೆಂಟೆಡ್ ಡ್ಯಾಂಗೆ ಸರ್ಕಾರ ತನ್ನ ಪಾಲಿನ ಮೊತ್ತವನ್ನೂ ಇನ್ನೂ ನೀಡಿಲ್ಲ. 40 ಕೋಟಿ ಆರಂಭಿಕ ಅಂದಾಜು ವೆಚ್ಚ ಇದ್ದಾಗ ಪಾಲಿಕೆ 13.33 ಕೋಟಿ ನೀಡಿತ್ತು, ಈಗ ಮತ್ತೆ 13.33 ಕೋಟಿ ನೀಡಿದೆ. ಇದೇ ಹಣದಲ್ಲಿ ಅಣೆಕಟ್ಟೆ ಕಾಮಗಾರಿ ನಡೆಯುತ್ತಿದೆ. ಆದರೆ ಸರ್ಕಾರ ತನ್ನ ಪಾಲಿನ ಮೊತ್ತವನ್ನು ಕೊಟ್ಟಿಲ್ಲ. ಈ ಬಗ್ಗೆ ಯೋಗೀಶ್ ಭಟ್ ಸತತ ಪ್ರಯತ್ನಿಸಿದರೂ ಸರ್ಕಾರದಿಂದ ಅನುದಾನ ಬಂದಿಲ್ಲ.
ಪೂರ್ಣಗೊಳ್ಳದ ಕಾಮಗಾರಿಗಳೇ ಜಾಸ್ತಿ: ಪಾಲಿಕೆ ವ್ಯಾಪ್ತಿಯಲ್ಲಿ ಒಳರಸ್ತೆಗಳ ಅಭಿವೃದ್ಧಿಗೆ 8.50 ಕೋಟಿ ಮಂಜೂರಾಗಿ ಟೆಂಡರ್ ಆಗಿದೆ, ಕಾಮಗಾರಿ ಶುರುವಾಗಿಲ್ಲ. ನಿರ್ಮಲ ಮಂಗಳೂರು ಯೋಜನೆಯಲ್ಲಿ ಮನೆ ಮನೆಯಿಂದ ಕಸಸಂಗ್ರಹ ಅಭಿಯಾನ ಪ್ರಾರಂಭವಾದರೂ ನಿರೀಕ್ಷಿತ ಸ್ಪಂದನ ಸಿಕ್ಕಿಲ್ಲ. ಈ ಅಭಿಯಾನ ಯೋಗೀಶ್ ಭಟ್ಟರ ಪ್ರಯತ್ನವಂತೆ.
ಮಿನಿವಿಧಾನಸೌಧ, ಕೋರ್ಟ್ ಸಂಕೀರ್ಣ ಮೇನಲ್ಲಿ ಪೂರ್ತಿಯಾಗುವ ನಿರೀಕ್ಷೆ. ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ 125 ಕೋಟಿ ಕಾಮಗಾರಿ ಮಾತ್ರ ಆಗಿದೆ. ರಸ್ತೆ ಕಾಂಕ್ರಿಟೀಕರಣಗೊಂಡರೂ, ಫುಟ್‌ಪಾತ್, ಒಳಚರಂಡಿ ಪೂರ್ಣಗೊಂಡಿಲ್ಲ. ಲೇಡಿಗೋಷನ್ ಆಸ್ಪತ್ರೆ ಕಾಮಗಾರಿ, ಸಿಂಥೆಟಿಕ್ ಕಾಮಗಾರಿ ಪ್ರಗತಿಯಲ್ಲಿದೆ.
ಬಹುನಿರೀಕ್ಷಿತ ಬಜಾಲ್-ಪಡೀಲ್ ರೇಲ್ವೆ ಲಿಂಗ್‌ಲೈನ್, ಜೆಪ್ಪು ಕೊಡಿಪ್ಪಾಡಿ ಕೆಳಸೇತುವೆ, ಮಾಂಕಾಳಿಪಡ್ಪು ಕೆಳಸೇತುವೆ, ಪಡೀಲ್ ಕೆಳಸೇತುವೆ ಆಗಿಲ್ಲ. ಸುಲ್ತಾನ್ ಬತ್ತೇರಿಯಲ್ಲಿ ತೂಗುಸೇತುವೆ, ರಥಬೀದಿಯ ಪ್ರಥಮ ದರ್ಜೆ ಕಾಲೇಜು ಹೊಸ ಕಟ್ಟಡ ಕಾಮಗಾರಿಯಲ್ಲಿದೆ. ಪ್ಲಾನಿಟೋರಿಯಂ, ಗಾಲ್ಫ್ ಕೋರ್ಸ್, ಓಷನೇರಿಯಂ, ಮಂಗಳಾ ಕಾರ್ನಿಶ್, ಅಂಬೇಡ್ಕರ್ ಭವನ, ಬಯಲು ರಂಗಮಂದಿರ ಯಾವಾಗ ಆಗುತ್ತೋ ಗೊತ್ತಿಲ್ಲ.