ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಶಿರ್ಲಾಲು: ವೈಭವದ ಮಹಾಮಸ್ತಕಾಭಿಷೇಕ

Mainashree
Updated On : 19 Feb 2013, 10:57 am

ಕಾರ್ಕಳ: ಜೈನರ ಪವಿತ್ರ ಕ್ಷೇತ್ರವಾಗಿ ಉದಯಿಸಿರುವ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಸಿದ್ದಗಿರಿಯಲ್ಲಿ ಆದಿತೀರ್ಥಂಕರ ಭಗವಾನ್ ಶ್ರೀಅನಂತನಾಥ ಸ್ವಾಮಿ, ಶ್ರೀ ಭರತ ಕೇವಲಿ, ಶ್ರೀ ಬಾಹುಬಲಿ ಕೇವಲಿ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವದಂಗವಾಗಿ ನಡೆದ ಪಂಚಕಲ್ಯಾಣ ಮಹೋತ್ಸವದಲ್ಲಿ ಸೋಮವಾರ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಬಹುವೈಭವದಿಂದ ನಡೆಯಿತು.
 ಇದಕ್ಕೆ ಪೂರ್ವಭಾವಿಯಾಗಿ ಶನಿವಾರ ತ್ರಿಮೂರ್ತಿ ಜಿನಬಿಂಬಗಳಿಗೆ ಜನ್ಮಾಭಿಷೇಕ ಮತ್ತು ಬಾಲ್ಯ ಲೀಲೋತ್ಸವ ಕಾರ್ಯಕ್ರಮಗಳು ನಡೆದವು. ಇದಕ್ಕೆ ಸಾವಿರಾರು ಮಂದಿ ಜೈನ ಭಕ್ತಾಭಿಮಾನಿಗಳು ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು.  ಸೋಮವಾರವಂತೂ ಮಹಾಮಸ್ತಾಕಾಭಿಷೇಕ ಸಮಾರಂಭದಲ್ಲಿ ನಾಡಿನಾದ್ಯಂತದಿಂದ ಜೈನ ಭಕ್ತರು, ಸಂತರು, ಸ್ವಾಮೀಜಿಗಳು ಮತ್ತು ಗಣ್ಯರ ಈ ಮಹಾಮಸ್ತಕಾಭಿಷೇಕವನ್ನು ಭಕ್ತಿ ಭಾವದಿಂದ ವೀಕ್ಷೀಸಿ ಕೃತಾರ್ಥರಾದರು. ಈ ಸಂದರ್ಭದಲ್ಲಿ ಭಕ್ತರ ಭಕ್ತಿ ಪರಾಕಾಷ್ಟೆಯನ್ನು ಮುಟ್ಟಿತ್ತು. ಸಂಜೆ 5 ಗಂಟೆಗೆ ಜಲಾಭಿಷೇಕದೊಂದಿಗೆ ಆರಂಭವಾಗಿ ಜೈನ ಸಂಪ್ರದಾಯದಂತೆ ವೈವಿಧ್ಯಮಯ ದ್ರವ್ಯಗಳ ಮಸ್ತಕಾಭಿಷೇಕ ವಿಧಿವಿಧಾನಗಳು ರಾತ್ರಿವರೆಗೆ ಸಾಂಗವಾಗಿ ನಡೆದವು. ಕಾರ್ಕಳ ಜೈನಮಠದ ರಾಜಗುರು ಧ್ಯಾನಯೋಗಿ ಸ್ವಸ್ತಿ ಶ್ರೀಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ, ಮೂಡುಬಿದರೆ ಜೈನಮಠದ ಭಾರತಭೂಷಣ ಸ್ವಸ್ತಿ ಶ್ರೀಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಅಖಿಲ ಭಾರತ ಜೈನ ಮಿಲನ್ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.
 ಪ್ರತಿಷ್ಠಾಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ, ಅಧ್ಯಕ್ಷ ರತ್ನವರ್ಮ ಪೂವಣಿ, ಪ್ರಧಾನ ಕಾರ್ಯದರ್ಶಿ ಪ್ರೋ. ಗುಣಪಾಲ ಕಡಂಬ ಶಿರ್ಲಾಲು ಹಾಗೂ ಸಮಿತಿಯ ವಿವಿಧ ಪದಾಧಿಕಾರಿಗಳು ಈ ಎಲ್ಲ ಕಾರ್ಯಕ್ರಮಗಳನ್ನು ಅತ್ಯಂತ ವೈಭವ ಮತ್ತು ವ್ಯವಸ್ಥಿತವಾಗಿ ನಡೆಸಿಕೊಟ್ಟರು. ಬೆಳಿಗ್ಗೆ 11 ಗಂಟೆಯಿಂದ ಮ್ಯಾಜಿಕ್ ಪ್ರದರ್ಶನ, ನಾಟಕ, ಜಾನಪದ ಗೀತೆ ಗಾಯನ, ನೃತ್ಯ ಕಾರ್ಯಕ್ರಮಗಳು ನಡೆದವು. ನಿರಂತರ 2 ಗಂಟೆಗಳ ಕಾಲ ನಡೆದ ಸುಡುಮದ್ದು ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement