ಸಹಸ್ರಲಿಂಗೇಶ್ವರ ಯೋಜನೆ ರಸ್ತೆಗೆ ತಡೆ
ಉಪ್ಪಿನಂಗಡಿ: ಕುಮಾರಾಧಾರ ನದಿಗೆ ಅಣೆಕಟ್ಟು ನಿರ್ಮಿಸಿ ಜಲ ವಿದ್ಯುತ್ ಉತ್ಪಾದಿಸುವ ಶ್ರೀಸಹಸ್ರಲಿಂಗೇಶ್ವರ ಕಿರು ಜಲ ವಿದ್ಯುತ್ ಯೋಜನೆಯ ಕಾಮಗಾರಿಗೆ ನಿರ್ಮಿಸಲಾದ ತಾತ್ಕಾಲಿಕ ರಸ್ತೆಗೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಡಳಿತ ಕಬ್ಬಿಣದ ಗೇಟು ಹಾಕಿ ಸಂಚಾರಕ್ಕೆ ತಡೆಯೊಡ್ಡಿದೆ. ಹಿರೆಬಂಡಾಡಿ ಗ್ರಾಮದ ಅಡೆಕ್ಕಲ್ ಎಂಬಲ್ಲಿ ಅಣೆಕಟ್ಟು ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗೆ ಅವಶ್ಯಕ ವಸ್ತುಗಳ ಪೂರೈಕೆಗೆ ಉಪ್ಪಿನಂಗಡಿ ಕುಮಾರಧಾರ ಸೇತುವೆ ಬಳಿಯಿಂದ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿತ್ತು. ಈ ಬಗ್ಗೆ ಒಂದೆರಡು ದಿನಗಳ ಹಿಂದೆ ಸ್ಥಳ ಪರಿಶೀಲನೆ ನಡೆಸಿದ ಪಂಚಾಯಿತಿ ಆಡಳಿತ, ಶನಿವಾರ ಕಬ್ಬಿಣದ ಗೇಟ್ ಅಳವಡಿಸಿ, ಸಂಚಾರಕ್ಕೆ ತಡೆಯೊಡ್ಡಿದೆ. ಕಿರುಜಲ ವಿದ್ಯುತ್ ಯೋಜನೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಇತ್ತ ಈ ಕಾಮಗಾರಿ ನಡೆಯುವಂತಾಗಲು ಜಿಲ್ಲಾಡಳಿತವೂ ಒಪ್ಪಿಗೆ ಸೂಚಿಸಿದೆ. ಅದರಂತೆ ಅಣೆಕಟ್ಟಿನ ಕಾಮಗಾರಿಯು ಸ್ಥಳೀಯ ನಿವಾಸಿಗರ ವಿರೋಧದ ನಡುವೆಯೂ ಸಾಗುತ್ತಿದೆ. ಇದೀಗ, ಕಂಪೆನಿ ನಿರ್ಮಿಸಿದ ರಸ್ತೆ ಸಂಚಾರಕ್ಕೆ ಪಂಚಾಯ್ತಿ ಆಡಳಿತ ತಡೆಯೊಡ್ಡಿದೆ.