ಕಡಿಮೆ ಬಾಡಿಗೆ ಪಡೆಯುತ್ತಿದ್ದ ಗೋವಾ ನೋಂದಣಿಯ 26 ಟಿಪ್ಪರ್ ಆರ್ಟಿಒ ವಶಕ್ಕೆ !
ಮಂಗಳೂರು: ಗೋವಾದಲ್ಲಿ ಗಣಿಗಾರಿಕೆ ಮುಗಿದ ಹಿನ್ನೆಲೆಯಲ್ಲಿ ಅಲ್ಲಿನ ಟಿಪ್ಪರ್ಗಳು ಪಣಂಬೂರು ಬಜಪೆ ಪ್ರದೇಶದಲ್ಲಿ ತೆರಿಗೆ ನೀಡದೆ, ಕಡಿಮೆ ಬಾಡಿಗೆ ಪಡೆದು ಕೆಲಸ ಮಾಡಿ ಆರ್ಟಿಒ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ ! ಪಣಂಬೂರಲ್ಲಿ 6, ಬಜಪೆಯಲ್ಲಿ 20 ಟಿಪ್ಪರ್ಗಳನ್ನು ಆರ್ಟಿಒ ಅಧಿಕಾರಿಗಳು ಪೊಲೀಸರ ಸಹಕಾರದಿಂದ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಗೋವಾದ ನೋಂದಣಿ ಹೊಂದಿರುವ ಟಿಪ್ಪರ್ಗಳು ಕೈಗಾರಿಕೆ ಪ್ರದೇಶಗಳಲ್ಲಿ ಇತ್ತೀಚೆಗೆ ಭಾರಿ ಸಂಖ್ಯೆಯಲ್ಲಿ ಕಂಡು ಬರುತ್ತಿವೆ. ಸ್ಥಳೀಯ ಟಿಪ್ಪರ್ಗಳಿಗಿಂತ ಕಡಿಮೆ ಬಾಡಿಗೆ ಪಡೆದು ಮಣ್ಣು, ಕಟ್ಟಡ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದರು. ಈ ಬಗ್ಗೆ ಸ್ಥಳೀಯ ಟಿಪ್ಪರ್ ಮಾಲೀಕರು ಆರ್ಟಿಒ ಅಧಿಕಾರಿಗಳಿಗೆ ದೂರು ನೀಡಿದ್ದರು.
ತಾತ್ಕಾಲಿಕ ಪರವಾನಗಿ ಪಡೆದು ಶಾಶ್ವತ ತೆರಿಗೆ ನೀಡದೆ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ವಾಹನ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಆರ್ಟಿಒ ಅಧಿಕಾರಿಗಳು ತಿಳಿಸಿದ್ದಾರೆ.