ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ವಾರ್ಡ್ಗಳಲ್ಲಿ ಬಿಜೆಪಿ ಸ್ಪರ್ಧೆ: ಮೋನಪ್ಪ ಭಂಡಾರಿ
ಮಂಗಳೂರು: ದ.ಕ.ಜಿಲ್ಲೆಯ ಸ್ಥಳೀಯಾಡಳಿತ ಚುನಾವಣೆಯಲ್ಲಿ ಬಿಜೆಪಿ ಎಲ್ಲ ವಾರ್ಡ್ಗಳಲ್ಲಿ ಸ್ಪರ್ಧಿಸಲಿದೆ. ಯಾರೊಂದಿಗೂ ಹೊಂದಾಣಿಕೆ ನಡೆಸದು ಎಂದು ವಿಧಾನಪರಿಷತ್ತು ಸದಸ್ಯ, ಜಿಲ್ಲಾ ವಕ್ತಾರ ಮೋನಪ್ಪ ಭಂಡಾರಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ಪಟ್ಟಿ ಪ್ರಕಟಿಸಲಾಗುವುದು. ಈ ಬಾರಿ ಎಲ್ಲ 180 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು, 125 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಕಳೆದ ಬಾರಿ 154 ಸ್ಥಾನದಲ್ಲಿ ಸ್ಪರ್ಧಿಸಿ 84 ಸ್ಥಾನಗಳಲ್ಲಿ ಮಾತ್ರ ಬಿಜೆಪಿ ಗೆದ್ದಿತ್ತು ಎಂದರು.
ಮಂಗಳೂರಿಗೆ ಮೋನಪ್ಪ ಭಂಡಾರಿ, ಪುತ್ತೂರಿಗೆ ವಿಶ್ವೇಶ್ವರ ಭಟ್ ಬಂಗಾರಡ್ಕ, ಸುಳ್ಯಕ್ಕೆ ಸಂಜೀವ ಮಠಂದೂರು, ಬೆಳ್ತಂಗಡಿಗೆ ಕುಶಾಲಪ್ಪ ಗೌಡ, ಬಂಟ್ವಾಳಕ್ಕೆ ಆನಂದ, ಮೂಡುಬಿದಿರೆಗೆ ಅಮಾನಾಥ ಕೋಟ್ಯಾನ್, ಉಳ್ಳಾಲಕ್ಕೆ ಸತೀಶ್ ಕುಂಪಲ ಚುನಾವಣಾ ಉಸ್ತುವಾರಿಗೆ ಪ್ರಭಾರಿ ಆಗಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರ್ನಾಲ್ಕು ಕ್ಷೇತ್ರಕ್ಕೆ ಒಬ್ಬೊಬ್ಬ ಪ್ರಭಾರಿ ನೇಮಿಸಲಾಗಿದೆ. ಜಿಲ್ಲೆಗೆ ಪ್ರತಾಪ್ಸಿಂಹ ನಾಯಕ್ ಪ್ರಭಾರಿ ಆಗಿದ್ದು, ಶಾಸಕ, ಸಂಸದರು ಸಾಥ್ ನೀಡಲಿದ್ದಾರೆ ಎಂದರು.
ಧನಂಜಯ್ ಜೆಡಿಎಸ್ಗೆ?: ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುವ ಕೇಂದ್ರ ಮಾಜಿ ಸಚಿವ ಧನಂಜಯ ಕುಮಾರ್, ನೀರಿಗೆ ಕಲ್ಲು ಬಿಸಾಡಿ ಸಂತೋಷ ಪಡುವುದು ಸರಿಯಲ್ಲ. ಪಕ್ಷಾಂತರದ ಬಗ್ಗೆ ಸಲ್ಲದ ಮಾತನಾಡದೆ, ಗೌರವದಿಂದ ಮಾತನಾಡಲು ಕಲಿಯಬೇಕು. ಡೀವಿ ಬಗ್ಗೆ ಊಹನಾತ್ಮಕ ಮಾತನಾಡುವ ಅವರೇ ಜೆಡಿಎಸ್ಗೆ ಹೋಗುತ್ತಾರೆಯೇ ಎಂದು ಮರು ಪ್ರಶ್ನಿಸಿದರು.