ಪೊಲೀಸ್, ಎಎನ್‌ಎಫ್ ಅಧಿಕಾರಿಗಳಿಗೆ ರಾಷ್ಟ್ರೀಯ ಭದ್ರತೆ ಕುರಿತ ತರಬೇತಿ ಶಿಬಿರ
ಮಂಗಳೂರು: ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳಿಗೆ ಮತ್ತು ನಕ್ಸಲ್ ನಿಗ್ರಹ ದಳ ಅಧಿಕಾರಿಗಳಿಗೆ ರಾಷ್ಟ್ರೀಯ ಭದ್ರತೆ ಕುರಿತ 2 ದಿನಗಳತರಬೇತಿ ಶಿಬಿರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಮಂಗಳವಾರ ಆರಂಭಗೊಂಡಿತು. ಬೆಂಗಳೂರಿನ ಸಮಕಾಲೀನ ಸಂಸ್ಥೆ ಕಾರ್ಯಕ್ರಮ ಆಯೋಜಿಸಿದ್ದು, ಪಶ್ಚಿಮ ವಲಯದ ಜಿಲ್ಲೆಗಳ 50ಕ್ಕೂ ಹೆಚ್ಚು ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ. ತರಬೇತಿ ಉದ್ಘಾಟಿಸಿದ ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಮಾತನಾಡಿ, ದೇಶದ ಆಂತರಿಕ ರಕ್ಷಣೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗೃಹ ಇಲಾಖೆ ಜವಾಬ್ದಾರಿ ಹೆಚ್ಚಿದೆ. ಇಲಾಖೆ ಸದಾ ಜಾಗೃತವಾಗಿರಬೇಕು. ಕರ್ನಾಟಕ ಮಿನಿ ಭಾರತ ಇದ್ದಂತೆ. ಇಲ್ಲಿ ಎಲ್ಲ ವರ್ಗದ, ಧರ್ಮ, ಸಂಸ್ಕೃತಿ, ಭಾಷೆ ಸೇರಿದಂತೆ ವಿದೇಶಿಯರು ಹೆಚ್ಚಿನ ಸಂಖ್ಯೆಲ್ಲಿದ್ದಾರೆ. ಆಯಾ ದೇಶದ, ರಾಜ್ಯಗಳಲ್ಲಿ ಘಟನೆ ನಡೆದರೆ ಆ ಬಗ್ಗೆ ಇಲ್ಲಿಯೂ ಪ್ರತಿಭಟನೆ ನಡೆದು ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರುತ್ತದೆ. ಪೆಟ್ರೊ ಕೆಮಿಕಲ್ಸ್, ರಕ್ಷಣೆ ವಲಯ ಕೈಗಾರಿಕೆಗಳು, ಅಣುಸ್ಥಾವರಗಳಿವೆ. ಆದ್ದರಿಂದ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ. ಕರಾವಳಿ ರಕ್ಷಣಾ ಪಡೆ, ನಕ್ಸಲ್ ನಿಗ್ರಹದಳಗಳು ಕೇವಲ ಸ್ಥಳೀಯ ವಿಚಾರಗಳ ಬಗ್ಗೆ ಚಿಂತಿಸುವುದು ಮಾತ್ರವಲ್ಲದೆ ರಾಜ್ಯದಲ್ಲಿ ಬೀಡುಬಿಟ್ಟಿರುವ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು, ಟಿಬೆಟ್ ನಾಗರಿಕರು, ವಿದೇಶಿಯರು ಸೇರಿದಂತೆ ಅವರ ಚಟುವಟಿಕೆಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಸೂಚಿಸಿದರು. ಪ್ರೊ.ಚೆಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿ ಕಾಶ್ಮೀರಿ ಕುಟುಂಬಗಳು, ಟಿಬೆಟಿಯನ್ನರು ಸೇರಿದಂತೆ ನಾನಾ ದೇಶಗಳ ಜನ ಶಿಕ್ಷಣ, ಪ್ರವಾಸಕ್ಕೆ ಆಗಮಿಸುತ್ತಿದ್ದಾರೆ ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಬೇಕು ಎಂದರು.