ಯುವಕನ ಕೊಂದು, ಚೀಲಕಟ್ಟಿ ಕಡಲಿಗೆಸೆದ ಹಂತಕರು
ಮಂಗಳೂರು: ಇಡ್ಯಾ ಸದಾಶಿವನಗರ ಗುಡ್ಡೆಕೊಪ್ಲ ನಿವಾಸಿ ಸಂದೀಪ (26)ನನ್ನು ಕೊಲೆ ಮಾಡಿದ ಜತೆಗಾರರೇ ಆದ ಹಂತಕರು ಕಡಲಿಗೆ ಎಸೆದಿದ್ದಾರೆ.
ಫೆ.16ರಂದು ನಾಪತ್ತೆಯಾಗಿದ್ದ ಇಡ್ಯಾ ಸದಾಶಿವನಗರ ಪಣಂಬೂರು ಮೀನಕಳಿಯ ಕಡಲ ಕಿನಾರೆಯಲ್ಲಿ ಮಂಗಳವಾರ ಶವ ಪತ್ತೆಯಾಯಿತು. ತಲೆ ಮತ್ತು ದೇಹದಲ್ಲಿ ಗಾಯಗಳಿವೆ. ಹೊಯ್ಗೆ ಚೀಲ ದೇಹಕ್ಕೆ ಕಟ್ಟಿ ಹಾಕಿರುವ ಹಿನ್ನೆಲೆಯಲ್ಲಿ ಹಂತಕರು ಕೊಲೆಗೈದು ಕಡಲಿಗೆ ಎಸೆದಿರುಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪಂಪ್ವೆಲ್ನಲ್ಲಿ ಕುಶನ್ ವರ್ಕ್ನಲ್ಲಿ ಕೆಲಸ ಮಾಡುತ್ತಿದ್ದರು. ಸುರತ್ಕಲ್ ಪರಿಸರದಲ್ಲಿ ಮನೆಗಳ ಕುಶನ್ ಕೆಲಸಗಳಿಗೆ ಹೋಗುತ್ತಿದ್ದರು. ಕೆಲವೊಮ್ಮೆ ಕ್ಯಾಟರಿಂಗ್ ಕೂಡಾ ಮಾಡುತ್ತಿದ್ದರು.
ಸಂದೀಪನ ಜತೆಗೆ ಇತ್ತೀಚೆಗೆ ಸ್ಥಳೀಯ ಸಹೋದ್ಯೋಗಿ ತಂಡದ ಜತೆ ಗಲಾಟೆ ನಡೆದಿತ್ತು. ಇದೀಗ ಗಲಾಟೆ ಮಾಡಿದವರು ತಲೆಮರೆಸಿಕೊಂಡಿದ್ದಾರೆ.
ಇದೂ ಕೂಡಾ ಕೊಲೆ ಪ್ರಕರಣ ಎಂಬುದಕ್ಕೆ ಪುಷ್ಟಿ ನೀಡಿದೆ. ಪಣಂಬೂರು ಎಸಿಪಿ ರವಿಕುಮಾರ್, ಇನ್ಸ್ಪೆಕ್ಟರ್ ಚೆಲುವರಾಜು, ಎಸ್ಐ ಭಾರತಿ, ಸುರತ್ಕಲ್ ಇನ್ಸ್ಪೆಕ್ಟರ್ ನಟರಾಜ್, ಎಸ್ಐ ಕುಮಾರೇಶ್ವರ್ ಸ್ಥಳಕ್ಕೆ ಭೇಟಿ ತನಿಖೆ ನಡೆಸುತ್ತಿದ್ದಾರೆ.